ಸಾವಿರ ಎಕರೆ ಭೂಮಿ ಮರು ವಶ ಪಡೆದಿರುವ ಬಗ್ಗೆ ಶ್ವೇತಪತ್ರ ಹೊರಡಿಸಿ; ಇಲ್ಲದಿದ್ದರೆ ಮತ್ತೆ ಹೋರಾಟ

| Published : Mar 09 2024, 01:35 AM IST / Updated: Mar 09 2024, 01:36 AM IST

ಸಾವಿರ ಎಕರೆ ಭೂಮಿ ಮರು ವಶ ಪಡೆದಿರುವ ಬಗ್ಗೆ ಶ್ವೇತಪತ್ರ ಹೊರಡಿಸಿ; ಇಲ್ಲದಿದ್ದರೆ ಮತ್ತೆ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಇರುವ ಮಾಹಿತಿ ಪ್ರಕಾರ 200 ಎಕರೆ ಮಾತ್ರ ವಶಕ್ಕೆ ಪಡೆಯಲಾಗಿದೆ. ಅದು ನಮ್ಮ ಹೋರಾಟದ ಫಲವೇ ಆಗಿದೆ. ಅಕ್ರಮ ಭೂ ಪರಭಾರೆ ಸಂಬಂಧ ಒಬ್ಬ ಸಿಬ್ಬಂದಿಯನ್ನು ಮಾತ್ರ ಅಮಾನತುಮಾಡಿದನ್ನು ಬಿಟ್ಟರೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಒಂದು ವಾರದೊಳಗೆ ಅವರ ವಿರುದ್ಧ ಕೈಗೊಂಡು ಪ್ರಕರಣದ ದಾಖಲೆಗಳನ್ನು ಬಿಡುಗಡೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಕ್ರಮ ಭೂಮಿ ಪರಭಾರೆ ಸಂಬಂಧ ತಾಲೂಕಿನಲ್ಲಿ ಒಂದು ಸಾವಿರ ಎಕರೆ ಭೂಮಿ ಮರು ವಶಕ್ಕೆ ಪಡೆದಿರುವ ಬಗ್ಗೆ ಶ್ವೇತಪತ್ರ ಹೊರಡಿಸದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಾವಿರ ಎಕರೆ ಮರು ವಶ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ದಾಖಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ನಮಗೆ ಇರುವ ಮಾಹಿತಿ ಪ್ರಕಾರ 200 ಎಕರೆ ಮಾತ್ರ ವಶಕ್ಕೆ ಪಡೆಯಲಾಗಿದೆ. ಅದು ನಮ್ಮ ಹೋರಾಟದ ಫಲವೇ ಆಗಿದೆ. ಅಕ್ರಮ ಭೂ ಪರಭಾರೆ ಸಂಬಂಧ ಒಬ್ಬ ಸಿಬ್ಬಂದಿಯನ್ನು ಮಾತ್ರ ಅಮಾನತುಮಾಡಿದನ್ನು ಬಿಟ್ಟರೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಒಂದು ವಾರದೊಳಗೆ ಅವರ ವಿರುದ್ಧ ಕೈಗೊಂಡು ಪ್ರಕರಣದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿದರು.

ಲೋಕಸಭೆ ಚುನಾವಣೆ ಗಿಮಿಕ್‌ಕ್ಕಾಗಿ ನಾನು ತಂದಿದ್ದ ಅನುದಾನವನ್ನು ತಮ್ಮದು ಎಂದು ಶಾಸಕರು ಹೇಳುತ್ತಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಗಾ 100 ಕೋಟಿ ರು. ವೆಚ್ಚದ ನಾಲಾ ಆಧುನೀಕರಣ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜಲಧಾರೆ ಯೋಜನೆಯಲ್ಲಿ ಜಿಲ್ಲೆಗೆ 1800 ಕೋಟಿ ರು. ನೀಡಿದ್ದರು. ಅದರಲ್ಲಿ ತಾಲೂಕಿಗೆ 170-180 ಕೋಟಿ ಅನುದಾನ ಬಂದಿದೆ. ಅದನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆ ಮಾಡಿಸಿದ್ದಾರೆ ಎಂದು ಟೀಕಿಸಿದರು.

ಬೆಳಕವಾಡಿ-ಶಿಂಷಾ ರಸ್ತೆ ಅಭಿವೃದ್ಧಿಗೆ 13 ಕೋಟಿ ರು. ತಂದಿದ್ದು ನಾನು. ಇವರು ಕೆಲಸ ಮಾಡಿಸಲಿ ಆದರೆ, ಮೊದಲು ಅಗಲೀಕರಣದಲ್ಲಿ ಮನೆ ಕಳೆದುಕೊಳ್ಳುವವರಿಗೆ ಪರಿಹಾರ ಕೊಡಿಸಬೇಕು. ಆ ಮೇಲೆ ಕಾಮಗಾರಿ ಆರಂಭಿಸಲಿ. ಸುಮ್ಮನೆ ಲೋಕಸಭೆ ಚುನಾವಣೆಗಾಗಿ ಗಿಮಿಕ್ ಮಾಡುವುದು ಸರಿಯಲ್ಲ. ರಾಜಕೀಯ ಕಾರಣಕ್ಕಾಗಿ ನನ್ನ ಅವಧಿಯ ಕನಕಭವನ, ಬಸವ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಮರಳು ದಂಧೆ ಆರಂಭವಾಗಿದ್ದೇ ಇವರ ಅವಧಿಯಲ್ಲಿ. ಆಗ ಮರಳು, ಈಗ ಮಣ್ಣಿನ ದಂಧೆ ನಡೆಯುತ್ತಿದೆ. ನನ್ನ ಕಾಲದಲ್ಲಿ ಅಕ್ರಮಗಳು ನಡೆಯುತ್ತಿದ್ದವು ಎಂದು ಆರೋಪ ಮಾಡುತ್ತಿದ್ದ ಶಾಸಕರಿಗೆ ಈಗ ಏನೂ ನಡೆಯುತ್ತಿದ್ದೆ ಎನ್ನುವುದಕ್ಕೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.

ನಾನು ಶಾಸಕನಾಗಿದ್ದ ವೇಳೆ ಮಾರೇಹಳ್ಳಿ ಬಳಿ ಬಡವರಿಗೆ ನಿವೇಶನ ಹಂಚಿಕೆ ಮಾಡಿ ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆ ಮಾಡಿಸಿದ ಪರಿಣಾಮ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದನ್ನು ಸಹಿಸದ ಶಾಸಕರು ಅದನ್ನು ಅಕ್ರಮ ಎಂದು ಹೇಳಿ ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದು ಸರಿಯಲ್ಲ. ಇವರ ಅವಧಿಯಲ್ಲಿ ಮಾಡದ ಕೆಲಸವನ್ನು ನಾನು ಮಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ನಾನು ಮೊದಲ ಬಾರಿ ಶಾಸಕನಾಗಿದ್ದ ವೇಳೆ ಪಟ್ಟಣದ ಬಡವರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಆಶ್ರಯ ಬಡಾವಣೆಗೆ ಜಾಗ ಗುರುತಿಸಿ ಫಲಾನುಭವಿಗಳ ಆಯ್ಕೆಯಾಗಿತ್ತು. ಆನಂತರ ಗೆದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು 10 ವರ್ಷ ಶಾಸಕರಾಗಿದ್ದರೂ ಅದನ್ನು ಅಭಿವೃದ್ಧಿ ಪಡಿಸಲು ಮುಂದಾಗಿರಲಿಲ್ಲ ಎಂದರು.

2018ರಲ್ಲಿ ಗೆದ್ದಾಗ ಬಡಾವಣೆಯ ಅಭಿವೃದ್ಧಿಗೆ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿ ರಸ್ತೆ, ಚರಂಡಿ, ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಪಟ್ಟಣದ ಬಹುತೇಕ ಬಡಾವಣೆಗಳಿಗೆ 20 ಅಡಿ ರಸ್ತೆಗಳೇ ಇರುವುದು, ಶಾಸಕರು ರಾಜಕೀಯ ದೃಷ್ಟಿಯಿಂದ ಯೋಚನೆ ಮಾಡುವುದನ್ನು ಬಿಟ್ಟು ಬಡವರ ಜೀವನದ ಬಗ್ಗೆಯೂ ಚಿಂತನೆ ನಡೆಸಲಿ ಎಂದರು.

ಇದೇ ವೇಳೆ ಜೆಡಿಎಸ್ ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬೆಳಕವಾಡಿ ಬಿ.ಎಂ.ಕಾಂತರಾಜು ಅವರಿಗೆ ನೇಮಕಾತಿ ಪತ್ರ ನೀಡಿ ಕೆ.ಅನ್ನದಾನಿ ಅಭಿನಂದಿಸಿದರು.

ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ನಾಗೇಶ್. ಎಂ.ಟಿ.ಪ್ರಶಾಂತ್, ಸಿದ್ದರಾಜು, ರವಿ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷ ಜಯರಾಮು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬುಲೆಟ್ ನಿಂಗಣ್ಣ, ಜೆಡಿಎಸ್ ತಾಲೂಕಿನ ಮಾಜಿ ಅಧ್ಯಕ್ಷ ಮಲ್ಲೇಗೌಡ, ಕಾರ್ಯಾಧ್ಯಕ್ಷ ಪುಟ್ಟಬುದ್ಧಿ, ಮುಖಂಡರಾದ ನಾಗರಾಜು, ಮೆಹಬೂಬ್ ಪಾಷಾ, ಸದಾನಂದ, ಮಲ್ಲೇಶ್, ಚಿಕ್ಕಪ್ರಕಾಶ್ ಇದ್ದರು.