ಅನಧಿಕೃತ ಆಸ್ತಿಗಳಿಗೆ 7 ದಿನಗಳಲ್ಲಿ ಇ-ಖಾತಾ ನೀಡಿ

| Published : Feb 19 2025, 12:46 AM IST

ಸಾರಾಂಶ

ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಲ್ಪ್ ಡೆಸ್ಕ್ ತೆರೆದು ಸಾರ್ವಜನಿರಿಗೆ ಅಗತ್ಯ ಮಾಹಿತಿ ನೀಡುವಂತೆ ಮತ್ತು ವ್ಯಾಪಕ ಅರಿವು ಹಾಗೂ ಜಾಗೃತಿ

ಕಾರವಾರ: ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಪಂ ವ್ಯಾಪ್ತಿಯಲ್ಲಿನ ಎಲ್ಲ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡುವ ಕಾರ್ಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಭಿಯಾನದ ಮಾದರಿಯಲ್ಲಿ ಕೈಗೊಂಡು 3 ತಿಂಗಳ ಒಳಗೆ ಈ ಕಾರ್ಯ ಮುಕ್ತಾಯಗೊಳಿಸುವಂತೆ ಹಾಗೂ ಅರ್ಜಿ ಸಲ್ಲಿಸಿದ 7 ದಿನಗಳ ಒಳಗೆ ಜಾಗದ ಮಾಲೀಕರಿಗೆ ಇ-ಖಾತಾ ನೀಡುವಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಅನಧಿಕೃತ ಆಸ್ತಿಗಳಿಗೆ ಸಹ ಇ-ಖಾತಾ ನೀಡಲು ಸರ್ಕಾರವು ಕಾಯ್ದೆ ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ತಂದಿದ್ದು, ಅನಧಿಕೃತ ಆಸ್ತಿಗಳ ಸ್ವತ್ತಿನ ಮಾಲೀಕರಿಂದ ಅಗತ್ಯ ದಾಖಲೆ ಸ್ವೀಕರಿಸಿ ಸಕಾಲ ತಂತ್ರಾಂಶದ ಮೂಲಕ 7 ದಿನದ ಒಳಗಾಗಿ ಇ-ಖಾತಾ ನೀಡುವಂತೆ ಸೂಚಿಸಿದರು.

ಈ ಕಾರ್ಯಕ್ಕಾಗಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಲ್ಪ್ ಡೆಸ್ಕ್ ತೆರೆದು ಸಾರ್ವಜನಿರಿಗೆ ಅಗತ್ಯ ಮಾಹಿತಿ ನೀಡುವಂತೆ ಮತ್ತು ವ್ಯಾಪಕ ಅರಿವು ಹಾಗೂ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿ ಗುರುತಿಸುವ ಕಾರ್ಯ2 ದಿನಗಳ ಒಳಗೆ ಮಾಡಬೇಕು. ಇದಕ್ಕಾಗಿ ಹೆಸ್ಕಾಂ ಮತ್ತು ಕಂದಾಯ ಇಲಾಖೆಯಲ್ಲಿರುವ ದತ್ತಾಂಶಗಳ ಮಾಹಿತಿ ಪಡೆದು ಪರಿಶೀಲಿಸಬೇಕು. ಇ-ಖಾತಾ ನೀಡುವ ಕಾರ್ಯದಲ್ಲಿ ಯಾವುದೇ ಹಂತದಲ್ಲೂ ಮಧ್ಯವರ್ತಿಗಳ ಹಾವಳಿ ಕಂಡು ಬರದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇ–ಖಾತಾ ನೀಡುವ ಕಾರ್ಯ ಸಂಪೂರ್ಣವಾಗಿ ಮುಗಿದ ನಂತರ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳು ಇಲ್ಲವೆಂದು ದೃಢೀಕರಣ ನೀಡಬೇಕು. ಇದರ ನಂತರವೂ ಅನಧಿಕೃತ ಬಡಾವಣೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಜವಾಬ್ದಾರರಾಗಲಿದ್ದು, ಅಂತಹ ಅಧಿಕಾರಿಗಳ ವಿರುದ್ಧ ನಾಗರೀಕಾ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಮಾತ್ರವಲ್ಲದೇ ದಂಡ ಮತ್ತು ಸೆರೆವಾಸದ ಶಿಕ್ಷೆಯನ್ನೂ ಕೂಡಾ ವಿಧಿಸಬಹುದಾಗಿದ್ದು, ಎಲ್ಲ ಅಧಿಕಾರಿಗಳು ಈ ಕಾರ್ಯ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ಎಲ್ಲ ನಗರಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಇದ್ದರು.