ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಚನ್ನಗಿರಿಯಲ್ಲಿ ಪ್ರಾರಂಭಿಸಲಾಯಿತು.

- ಅಂಬೇಡ್ಕರ್‌ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

- - -

ಚನ್ನಗಿರಿ: ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಹಿರೇಕೂಗಲೂರು ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂಬರ್ 46ರಲ್ಲಿ 58 ಎಕರೆ ಜಮೀನು ಇದೆ. ಈ ಜಾಗದಲ್ಲಿ ಸರ್ಕಾರ ಗ್ರಾಮ ಅಭಿವೃದ್ಧಿ ಯೋಜನೆಗಳಿಗಾಗಿ ಮಿಸಲಿಟ್ಟಿರುವುದು ಸ್ವಾಗತಾರ್ಹ. ಆದರೆ ಇದೇ ಜಮೀನಿನಲ್ಲಿ ನಿವೇಶನರಹಿತರಿಗೆ ಮಂಜೂರು ಮಾಡಿದ ಜಮೀನು ದಾಖಲೆಗಳನ್ನು ಗ್ರಾಮ ಮತ್ತು ತಾಲೂಕು ಸರ್ವೆ ಅಧಿಕಾರಿಗಳು ಹಕ್ಕುಪತ್ರಗಳನ್ನು ನಿವೇಶನ ರಹಿತರಿಗೆ ವಿತರಿಸದೇ ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಕಳೆದ ಕೆಲ ತಿಂಗಳ ಹಿಂದೆ ನಿವೇಶನರಹಿತರಿಗೆ ಹಕ್ಕುಪತ್ರ ಕೊಡಬೇಕು ಎಂದು ಪ್ರತಿಭಟಿಸಲಾಗಿತ್ತು. ಆಗ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿವೇಶನ ಮಂಜೂರು ಮಾಡುವ ಭರವಸೆ ನೀಡಿದ್ದರು. ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದರು. ಆದರೆ ಇದುವರೆಗೂ ನಿವೇಶನ ಮಂಜೂರಾತಿ ಪತ್ರಗಳನ್ನು ಮಾತ್ರ ನೀಡಿಲ್ಲ. ಗ್ರಾಮ ಆಡಳಿತ, ತಾಲೂಕು ಆಡಳಿತ, ಜಿಲ್ಲಾಡಳಿತಗಳು ಮತ್ತು ಚುನಾಯಿತ ಪ್ರತಿನಿಧಿಗಳು ಕೂಡಲೇ ಹಕ್ಕುಪತ್ರಗಳನ್ನು, ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲಿಯವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.

ಜನಪ್ರತಿನಿಧಿಗಳಾದವರು ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡಬೇಕಾಗಿದ್ದು ಈ ದಲಿತ ವರ್ಗದ ಜನರ ಸಮಸ್ಯೆಗಳಿಗೆ ಕೂಡಲೇ ಸ್ಫಂಧಿಸಿ ಕೆಲಸ ಮಾಡಬೇಕು. ಅಧಿಕಾರಿಗಳಾದವರು ಈ ಬಡಜನರಿಗೆ ಹಕ್ಕುಪತ್ರಗಳನ್ನು ತಕ್ಷಣವೇ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಪ್ರಮುಖರಾದ ಚೀಲೂರು ಕುಮಾರ್, ನೀತಿಗೆರೆ ಮಂಜಪ್ಪ, ನವಿಲೇಹಾಳ್ ಕೃಷ್ಣಪ್ಪ, ಭರಮಪ್ಪ, ಪ್ರವೀಣ್, ಮುತ್ತುರಾಜ್, ರಾಜು, ನಿವೇಶನರಹಿತರು ಪಾಲ್ಗೊಂಡಿದ್ದರು.

- - -

-3ಕೆಸಿಎನ್‌ಜಿ1:

ಹಿರೇಕೋಗಲೂರಲ್ಲಿ ನಿವೇಶನರಹಿತ ಬಡಜನರಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಲಾಯಿತು.