ಸಿಂಗ್ ಅವಧಿಯ ತೆರಿಗೆ ಪಾಲು ಶ್ವೇತಪತ್ರ ಹೊರಡಿಸಿ

| Published : Apr 22 2024, 02:02 AM IST

ಸಾರಾಂಶ

ರಾಮನಗರ: ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ಮೋಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡದ ಅಸ್ಮಿತೆ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕ ತೆರಿಗೆ ಪಾಲಿನ ಹಣ ಎಷ್ಟೆಂಬುದರ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಸವಾಲು ಹಾಕಿದರು.

ರಾಮನಗರ: ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ಮೋಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡದ ಅಸ್ಮಿತೆ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕ ತೆರಿಗೆ ಪಾಲಿನ ಹಣ ಎಷ್ಟೆಂಬುದರ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ಮತ್ತು 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಎಷ್ಟು ಹಣ ಬಂದಿತೆಂದು ವಿವರಣೆ ನೀಡಲಿ. ಮನಮೋಹನ್ ಸಿಂಗ್ ಅವಧಿಯಲ್ಲಿ 2009ರಿಂದ 2014ರ ಅವಧಿವರೆಗೆ 82 ಸಾವಿರ ಕೋಟಿ ಬಂದಿದ್ದರೆ, ಮೋದಿ ನೇತೃತ್ವದ ಸರ್ಕಾರದಲ್ಲಿ 2014-2023ರವರೆಗೆ 2.81 ಲಕ್ಷ ಸಾವಿರ ಕೋಟಿ ಹಣ ಬಂದಿದೆ ಎಂದರು.

ಮೋದಿ ಸರ್ಕಾರ 100 ರುಪಾಯಿ ಕೊಟ್ಟರೆ 13 ರುಪಾಯಿ ವಾಪಸ್ ಕೊಡುತ್ತಾರೆಂದು ಕಾಂಗ್ರೆಸ್ ಪಕ್ಷ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಹಾಗಾದರೆ ಮನಮೋಹನ್ ಸಿಂಗ್ ಅವಧಿಯಲ್ಲಿ 100 ರುಪಾಯಿಗೆ 100 ರುಪಾಯಿಯೇ ಕೊಡುತ್ತಿದ್ದರಾ ಎಂಬುದನ್ನು ಶ್ವೇತ ಪತ್ರ ಹೊರಡಿಸಿ ಸ್ಪಷ್ಟ ಪಡಿಸಲಿ. ಈ ರೀತಿ ಏಕೆ ಸುಳ್ಳು ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಹಣಕಾಸು ಸಚಿವರಾಗಿ ಸಿದ್ದರಾಮಯ್ಯರವರು ನೀತಿ ಆಯೋಗ ಮತ್ತು ಜಿಎಸ್ಟಿ ಕೌನ್ಸಿಲ್ ಸಭೆಗೆ ಹೋಗುವುದಿಲ್ಲ. ಅವರ ಬದಲು ಸಚಿವ ಕೃಷ್ಣ ಭೈರೇಗೌಡ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಬಂದ ಮೇಲೆ ಅವರು ಒಂದೇ ಒಂದು ದಿನ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಯಿತೆಂದು ಹೇಳಲೇ ಇಲ್ಲ. ಈಗ ಕಾಂಗ್ರೆಸ್‌ನವರು ನನ್ನ ತೆರಿಗೆ ನನ್ನ ಹಕ್ಕು ಎಂದು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.

2014ರಲ್ಲಿ ಮೋದಿಯವರು ಬೇರೆ ಅರ್ಥದಲ್ಲಿ ಹೇಳಿದ ಕೆಲ ವಿಷಯಗಳನ್ನು ಮುಂದಿಟ್ಟುಕೊಂಡು 15 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಹಸಿಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಣಕಾಸಿನ ವಿಷಯವಾಗಿ ಯಾವ ರೀತಿ ಸಮನ್ವಯತೆ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಜ್ಞಾನವೂ ಇಲ್ಲ ಎಂದು ಲೇವಡಿ ಮಾಡಿದರು.

ನಾಡಿನ ಹೇಮಾವತಿ, ಕಬಿನಿ, ಕೆಆರ್‌ಎಸ್ ಜಲಾಶಯಗಳಲ್ಲಿದ್ದ ನೀರನ್ನು ತಮಿಳುನಾಡಿಗೆ ಹರಿಸಿ ರೈತರಿಗೆ ದ್ರೋಹ ಬಗೆದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುತ್ತಿದ್ದಾರೆ. 2018ರಲ್ಲಿ ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರ ಸಾಧ್ಯತಾ ವರದಿ ಕೊಡುವಂತೆ ಕೇಳಿತು. ಆಗಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ವರದಿ ಸಲ್ಲಿಸಿತು. ಜಲ ಆಯೋಗ ಡಿಪಿಆರ್ ಕೇಳಿದಾಗ 2019ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ 9 ಸಾವಿರ ಕೋಟಿಯ ಡಿಪಿಆರ್ ಕಳುಹಿಸಿಕೊಟ್ಟಿತು ಎಂದು ಹೇಳಿದರು.

ಈ ಸಂಗತಿ ಗೊತ್ತಿದ್ದರೂ 2022ರಲ್ಲಿ ಡಿ.ಕೆ.ಶಿವಕುಮಾರ್ ಮೇಕೆದಾಟು ಹೆಸರಿನಲ್ಲಿ ನನ್ನ ನೀರು ನನ್ನ ಹಕ್ಕು ಪಾದಯಾತ್ರೆ ನಡೆಸಿದರು. ಆಗ ಜಲ ಸಂಪನ್ಮೂಲ ಸಚಿವ ರಾಜೇಂದ್ರ ಸಿಂಗ್ ಶೇಖಾವತ್ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಿದರಾದರು ಅದು ಸಾಧ್ಯವಾಗಲಿಲ್ಲ. ಸುಪ್ರಿಂ ಕೋರ್ಟಿನಲ್ಲಿ ವ್ಯಾಜ್ಯ ಬಾಕಿ ಇದ್ದಾಗ ಯಾವುದೇ ಪ್ರಧಾನಿಗಳು ಅಂತಹ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ಈ ಸಾಮಾನ್ಯ ಜ್ಞಾನ ಕೂಡ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 609 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ 6 ಸಾವಿರ, 60 ಲಕ್ಷ ಮನೆಗಳಿಗೆ ಜಲ್ ಜೀವನ್ ಮಿಷನ್ ಅಡಿಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಯೋಜನೆಗಳನ್ನು ಕೊಟ್ಟಿದೆ. ಕಾಂಗ್ರೆಸ್ ಅಪಪ್ರಚಾರದ ಚೊಂಬೇ ನಮಗೆ ಅಕ್ಷಯ ಪಾತ್ರೆಯಾಗಲಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆನಂದಸ್ವಾಮಿ, ರುದ್ರದೇವರು, ನರಸಿಂಹಮೂರ್ತಿ, ಉಮೇಶ್, ದೊರೆಸ್ವಾಮಿ, ಜಯಕುಮಾರ್, ಕೆಂಪರಾಜು, ಕಾಳಯ್ಯ, ದರ್ಶನ್ ರೆಡ್ಡಿ, ಶಿವಾನಂದ ಸೇರಿದಂತೆ ಹಲವರು ಇದ್ದರು.

ಬಾಕ್ಸ್‌..............

ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜಿಹಾದಿ ಮತ್ತು ತಾಲಿಬಾನಿ ಮನಸ್ಥಿತಿ ವಿರೋಧಿಸಿ ಏ.22ರಂದು ಸೋಮವಾರ ಬಿಜೆಪಿ - ಜೆಡಿಎಸ್ ಜಂಟಿಯಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ಕೋಮಿಗೆ ತುಷ್ಠೀಕರಣ ಮಾಡಿಕೊಂಡು ರಾಜ್ಯವನ್ನು ಜಿಹಾದಿ ಮನಸ್ಥಿತಿಗೆ ಕೊಂಡೊಯ್ಯುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ವಿರುದ್ಧ ಹೋರಾಟ ನಡೆಸಲಿದೆ ಎಂದರು.

ಮಂಗಳೂರು ಕುಕ್ಕರ್ ಬಾಂಬ್, ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಶಿವಮೊಗ್ಗದಲ್ಲಿ ಔರಂಗ್‌ಜೇಬ್‌ನ ಭಾವಚಿತ್ರವಿರುವ ಕಟೌಟ್, ಕೋಲಾರದಲ್ಲಿ ತಲ್ವಾರ್ ಕಟೌಟ್, ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಲು, ಹನುಮಾನ್ ಚಾಲೀಸ ಹಾಕಿದ್ದಕ್ಕೆ, ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಕೊಲೆ ಬೆದರಿಕೆ ಹಾಕಿದರು.

ರಾಜ್ಯಸಭಾ ಸದಸ್ಯರಾಗಿ ನಾಸೀರ್ ಹುಸೇನ್ ಆಯ್ಕೆಯಾದ ವೇಳೆ ವಿಧಾನಸೌಧದಲ್ಲಿ ಕೆಲವರು ಪಾಕಿಸ್ತಾನ ಪರ ಘೋಷಣೆ ಕೂಗಿದರು. ಇಲ್ಲಿವರೆಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದನ್ನು ಖಂಡಿಸುವ ತಾಕತ್ತನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರ್ದರ್ಶಿಸಲಿಲ್ಲ ಎಂದು ಟೀಕಿಸಿದರು.

ಈಗ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ವ್ಯಕ್ತಿಯನ್ನು ರಕ್ಷಣೆ ಮಾಡಲು ವೈಯಕ್ತಿಕ ಕಾರಣವೆಂದು ಬೇಜವಾಬ್ದಾರಿ ಹೇಳಿಕೆ ನೀಡಿದರು. ಇಂತಹ ಜಿಹಾದಿ ಮನಸ್ಥಿತಿಯ ಓಲೈಕೆಯೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣ ಎಂದು ಅಶ್ವತ್ಥ ನಾರಾಯಣಗೌಡ ಕಿಡಿಕಾರಿದರು.

(ಪ್ಯಾನಲ್‌ನಲ್ಲಿ ಈ ಕೋಟ್‌ ಬಳಸಿ)

ಕೋಟ್ ............

ಕೇಂದ್ರದಲ್ಲಿ ಆಡಳಿತ ಪಕ್ಷದಲ್ಲಿದ್ದ ಬಿಜೆಪಿ ನೇತೃತ್ವದ ಎನ್ ಡಿಎ ತನ್ನ ಹತ್ತು ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟುಕೊಂಡು ಚುನಾವಣೆ ನಡೆಸುತ್ತಿದೆ. ಆಡಳಿತ ಪಕ್ಷದ ವೈಫಲ್ಯಗಳನ್ನು ಟೀಕೆ ಮಾಡುವುದು ವಿಪಕ್ಷದ ಜವಾಬ್ದಾರಿ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಾವು ಆಡಳಿತ ಪಕ್ಷದಲ್ಲಿದ್ದೇವೊ ಅಥವಾ ವಿರೋಧ ಪಕ್ಷದಲ್ಲಿದ್ದೇವೋ ಎಂಬ ಪರಿಜ್ಞಾನವೇ ಇಲ್ಲ. ಹಸೀ ಸುಳ್ಳು ಹೇಳಿಕೊಂಡು ಅಪಪ್ರಚಾರದ ಮೂಲಕ ಲೋಕಸಭಾ ಚುನಾಣೆಯಲ್ಲಿ ಮತ ಪಡೆಯಲು ಮುಂದಾಗಿದೆ.

-ಅಶ್ವತ್ಥ ನಾರಾಯಣಗೌಡ, ವಕ್ತಾರರು, ಬಿಜೆಪಿ21ಕೆಆರ್ ಎಂಎನ್ 3.ಜೆಪಿಜಿ

ರಾಮನಗರದಲ್ಲಿ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.