ದಂಡಿನಶಿವರ ಪ್ರಜಾ ಸೇವಾ ಅಭಿಯಾನದಲ್ಲಿ ಸಮಸ್ಯೆಗಳ ಅನಾವರಣ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸಾರ್, ನಮ್‌ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಇಲ್ಲ. ರಾತ್ರಿ ವೇಳೆ ಡಾಕ್ಟರ್ ಇಲ್ಲ. ಪೊಲೀಸ್‌ ಸ್ಟೇಷನ್‌ ಸರಿಯಾಗಿಲ್ಲ. ಸಿಬ್ಬಂದಿ ಇಲ್ಲ. ಪಿಡಿಒಗಳು ಇ ಖಾತೆ ಮಾಡಿ ಕೊಡ್ತಿಲ್ಲ. ತ್ರಿಫೇಸ್ ಕರೆಂಟ್‌ ಕೊಡ್ತಿಲ್ಲ. 108 ಬರಲ್ಲ. ಆಂಬ್ಯುಲೆನ್ಸ್‌ ಇಲ್ಲ. ಬಸ್‌ ಗಳು ಸರಿಯಾಗಿ ಬರ್ತಿಲ್ಲ. 11 ಕೆವಿ ಲೈನ್‌ ತೆಗೆಯಿರಿ ಅಂದ್ರೂ ತೆಗೀತಿಲ್ಲ. ರಸ್ತೆ ಸರಿ ಇಲ್ಲ. ಬಸ್‌ ನಿಲ್ದಾಣ ಇಲ್ಲ. ನಾಡ ಕಚೇರಿಯಲ್ಲಿ ಸೂಕ್ತ ದಾಖಲಾತಿಗಳು ಸಿಗ್ತಿಲ್ಲ. ಸ್ವಚ್ಚತೆ ಇಲ್ಲ. ಲೈಟ್‌ ಇಲ್ಲ. ಚರಂಡಿಗಳು ಕ್ಲಿನ್‌ ಇಲ್ಲ.

ಹೀಗೇ ಇಲ್ಲಾ ಇಲ್ಲಾಗಳ ಆಗರ ದಂಡಿನಶಿವರದಲ್ಲಿ ನಡೆದ ಪ್ರಜಾಸೇವಾ ಅಭಿಯಾನದಲ್ಲಿ ಅನಾವರಣಗೊಂಡಿತು. ದಂಡಿನಶಿವರ ಗ್ರಾಮದ ಮುಖಂಡರಾದ ಶಂಕರೇಗೌಡ, ಅಮ್ಮಸಂದ್ರ ಸಿದ್ದಗಂಗಯ್ಯ, ರಾಜಕುಮಾರ್, ದಲಿತ ಮುಖಂಡ ದಂಡಿನಶಿವರ ಕುಮಾರ್‌ ಸೇರಿದಂತೆ ಹಲವಾರು ಮುಖಂಡರು ಸಮಸ್ಯೆಗಳ ಅನಾವರಣಗೊಳಿಸಿದರು.

ಇದಕ್ಕೆಲ್ಲಾ ಉತ್ತರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಇದೊಂದು ಅಯೋಗ್ಯ ಸರ್ಕಾರ. ಶಾಸಕರ ಅನುದಾನವನ್ನೇ ಇದುವರೆಗೂ ನೀಡಿಲ್ಲ. ಬರಗಾಲದ ಪರಿಹಾರ ಧನ ನೀಡ್ತೀವಿ ಎಂದವರು. ಇದುವರೆಗೂ ನೀಡಿಲ್ಲ. ನಮ್ಮ ತಾಲೂಕಿಗೆ ಅಗತ್ಯವಿರುವ ಹೇಮಾವತಿ ನೀರು ಬಿಡ್ಕೊಳ್ಳೋಕೂ ಕಿರಿಕ್‌ ಮಾಡ್ತಾರೆ ಅಂತ ಛೇಡಿಸಿದರು.

ನಾನೇ ಚಾನಲ್‌ ಮೇಲೆ ಓಡಾಡಿ ತೂಬುಗಳನ್ನೆತ್ತಿ ನೀರು ಬಿಡಿಸಿದೆ. ಆದರೆ ಕುಣಿಗಲ್‌ ಶಾಸಕ ರಂಗನಾಥ್‌ ಪೊಲೀಸ್‌ ಹಾಕಿ ತೂಬು ಮುಚ್ಚಿಸುತ್ತಾರೆ. ತಾಲೂಕು ಬರದಿಂದ ತತ್ತರಿಸಿದೆ. ಕನಿಷ್ಠ ಅರ್ಧ ಕೆರೆಯನ್ನಾದರೂ ತುಂಬಿಸೋಣ ಎಂದರೆ ಈ ಕೆಟ್ಟ ಸರ್ಕಾರ ಬಿಡುತ್ತಿಲ್ಲ. ಇನ್ನು ಈ ಅಧಿಕಾರಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ಬಗರ್‌ ಹುಕುಂ, ದರಖಾಸ್ತು ಜಮೀನಿನನ್ನು ಸರಿಪಡಿಸಿಕೊಡಲು ಪ್ರತಿ ಗುಂಟೆಗೆ 400 ರೂ ಲಂಚಪಡೀತಾರೆ. ನಾನೇ ಹೇಳಿದರೂ ಸಹ ದುಡ್ಡಿಲ್ಲದೇ ಕೆಲಸ ಮಾಡಲ್ಲ. ಇಂತಹ ಹೀನ ಸ್ಥಿತಿ ಇದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾದಿಸಿದರು.

ಇಂದಿನ ಪ್ರಜಾ ಸೇವೆ ಆಂದೋಲನ ಸಭೆಗೆ ಹೇಮಾವತಿ ನಾಲಾ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಇವರೂ ಸೇರಿದಂತೆ ಈ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ನೋಟೀಸ್‌ ಜಾರಿ ಮಾಡಿ ಎಂದು ತಹಸೀಲ್ದಾರರಿಗೆ ಸೂಚಿಸಿ ನನಗೂ ಒಂದು ಕಾಪಿ ಹಾಕಿ. ಸರ್ಕಾರದ ಕಾರ್ಯದರ್ಶಿಗಳ ಬಳಿ ಈ ಬಗ್ಗೆ ತಾವೂ ಸಹ ದೂರು ಸಲ್ಲಿಸಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡುವುದಾಗಿ ಹೇಳಿದರು. ತಹಸೀಲ್ದಾರ್‌ ಎನ್.‌ ಎ.ಕುಂಇ ಅಹಮದ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಲೋಕೋಪಯೋಗಿ ಇಲಾಖೆ ಎಇಇ ಕಣ್ಮಣಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪೂಜಾ, ಸಮಾಜ ಕಲ್ಯಾಣಾಧಿಕಾರಿ ರಮೇಶ್‌ ನಾಯಕ್‌, ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ದೊಡ್ಡೇಗೌಡ, ಕೆಎಸ್‌ ಆರ್‌ ಟಿಸಿ ಬಸ್‌ ಡಿಪೋ ಮ್ಯಾನೇಜರ್‌ ತಮ್ಮಯ್ಯ, ದಂಡಿನಶಿವರ ಉಪತಹಶೀಲ್ದಾರ್ ಲಿಂಗರಾಜು, ಗುಡಿಗೌಡರಾದ ಸಿದ್ದೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.