ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ: ತುಕಾರಾಂ

| Published : Apr 15 2024, 01:16 AM IST

ಸಾರಾಂಶ

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ೫ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ

ಸಂಡೂರು: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ೫ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಹೇಳಿದರು.

ತಾಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ನಾನು ಹುಟ್ಟಿದ್ದು ಯಶವಂತನಗರದಲ್ಲಿ. ಆದರೆ ಜೀವನ ಕೊಟ್ಟಿದ್ದು ಕೃಷ್ಣಾನಗರ. ಕ್ಷೇತ್ರದ ಜನತೆ ನಾಲ್ಕು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ಅವರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕೃಷ್ಣಾನಗರದಲ್ಲಿ ೧.೨೦ ಕೋಟಿ ವೆಚ್ಚದಲ್ಲಿ ಶಾಲೆಯನ್ನು ನಿರ್ಮಿಸಿಕೊಡಲಾಗಿದೆ. ಬರುವ ದೀಪಾವಳಿಯ ಹೊತ್ತಿಗೆ ನಾರಿಹಳ್ಳ ಜಲಾಶಯದಿಂದ ಕುಡಿಯುವ ನೀರನ್ನು ಪೂರೈಸಲಾಗುವುದು. ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.

ಮನಮೋಹನ್ ಸಿಂಗ್ ಯುಪಿಎ ಸರ್ಕಾರ ರೈತರ ₹೭೨ ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ರೈತರಿಗೆ ೩ ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಕೃಷಿ ಹೊಂಡ ಮುಂತಾದ ಜನಪರ ಕಾರ್ಯಕ್ರಮಗಳಿಂದ ರೈತರಿಗೆ ತುಂಬ ಅನುಕೂಲವಾಗಿದೆ ಎಂದು ವಿವರಿಸಿದರು.

೨೦೧೪ರ ನಂತರ ನರೇಂದ್ರಮೋದಿಯವರ ನೇತೃತ್ವದ ಸರ್ಕಾರ ತಾನು ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಜನರ ಅಕೌಂಟಿಗೆ ೧೫ ಲಕ್ಷ ಹಾಕಲಿಲ್ಲ. ರೈತರ ಸಾಲಾ ಮನ್ನಾ ಮಾಡುವ ಬದಲಾಗಿ, ಕೇಂದ್ರ ಸರ್ಕಾರ ದೊಡ್ಡ ಉದ್ದಿಮೆದಾರರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿದರು. ಸಾವಿರ, ಐನೂರು ರುಪಾಯಿ ನೋಟು ರದ್ದತಿಯಿಂದ ಯಾರಿಗೆ ಉಪಯೋಗವಾಯಿತು ಎಂದರಲ್ಲದೆ, ಸಣ್ಣ ಉದ್ದಿಮೆಗಳು ಮುಚ್ಚಿದ್ದರಿಂದ ಕಳೆದ ೧೦ ವರ್ಷದಲ್ಲಿ ೧೪ ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ೨೦೧೪ರ ನಂತರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಮಾಡಿದ ಸಾಲದಿಂದಾಗಿ ಇಂದು ಪ್ರತಿಯೊಬ್ಬರ ತಲೆ ಮೇಲೆ ₹೧.೧೦ ಲಕ್ಷ ಸಾಲ ಇದೆ. ಎನ್‌ಡಿಎ ಆಡಳಿತದಿಂದ ಅಚ್ಛೇದಿನ್ ಬರಲಿಲ್ಲ. ಬುರಾ ದಿನ್ ಬಂದಿದೆ ಎಂದು ಕಿಡಿಕಾರಿದರು.

ಸರ್ವ ಸಮಾಜದ ಪ್ರೀತಿಯನ್ನು ಗಳಿಸಿ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು, ಕ್ಷೇತ್ರದ ಜನತೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಜನತೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಹೆಚ್ಚಿನ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ. ಜನತೆ ಅಧಿಕಾರವನ್ನು ನೀಡಿದಲ್ಲಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಅಭ್ಯರ್ಥಿ ಈ.ತುಕಾರಾಂ ತಾಲೂಕಿನ ಭುಜಂಗನಗರ, ಸುಶೀಲಾನಗರ, ತಾರಾನಗರ, ಬನ್ನಿಹಟ್ಟಿ ಮುಂತಾದೆಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.

ಮುಖಂಡರಾದ ಡಾ.ಚನ್ನಬಸಪ್ಪ, ಸಿದ್ದೇಶ್, ಹುಚ್ಚಪ್ಪ, ಬಾಣ್ದಾರ್ ಸುಬಾನ್‌ಸಾಬ್, ರೇಣುಕಾ ದೇವೇಂದ್ರಪ್ಪ, ರೆಡ್ಡಿಬಾಬು, ವಿರುಪಾಕ್ಷಿ, ನಾಗರಾಜ, ಎಚ್.ಕೆಂಚಪ್ಪ ಮುಂತಾದವರು ಉಪಸ್ಥಿತರಿದ್ದರು.