ಸಾರಾಂಶ
ಬಿಬಿಎಂಪಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಮುನಿರೆಡ್ಡಿ ಲೇಔಟ್‌ನಲ್ಲಿ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ 30 ಅಡಿ ರಸ್ತೆಗೆ ಬಿಬಿಎಂಪಿ ಅಧಿಕಾರಿಗಳು ಬಿ ಖಾತಾ ನೀಡಿದ ಆರೋಪ ಕೇಳಿಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಮುನಿರೆಡ್ಡಿ ಲೇಔಟ್‌ನಲ್ಲಿ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ 30 ಅಡಿ ರಸ್ತೆಗೆ ಬಿಬಿಎಂಪಿ ಅಧಿಕಾರಿಗಳು ಬಿ ಖಾತಾ ನೀಡಿದ ಆರೋಪ ಕೇಳಿಬಂದಿದೆ.ಕಳೆದ 20 ವರ್ಷಗಳ ಹಿಂದೆಯೇ 6 ಎಕರೆ ಪ್ರದೇಶದಲ್ಲಿ ಮುನಿರೆಡ್ಡಿ ಲೇಔಟ್ ರಚಿಸಲಾಗಿದೆ. ಲೇಔಟ್‌ನ ಮಧ್ಯಭಾಗದಲ್ಲಿ 30 ಅಡಿ ರಸ್ತೆಯಿದ್ದು, ಲೇಔಟ್ ರಚನೆಯಾದಾಗಿನಿಂದ ಅದನ್ನು ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಆದರೆ, ಕಳೆದ ಡಿಸೆಂಬರ್‌ನಲ್ಲಿ ಆ ರಸ್ತೆ ತಮಗೆ ಸೇರಿದ್ದು ಅರ್ಜಿ ಸಲ್ಲಿಸಿದ ಖಾಸಗಿ ವ್ಯಕ್ತಿ ಹೆಸರಿಗೆ ಬೊಮ್ಮನಹಳ್ಳಿ ವಲಯ ಕಂದಾಯ ವಿಭಾಗದ ಅಧಿಕಾರಿಗಳು ಬಿ ಖಾತಾ ನೀಡಿದ್ದಾರೆ. ಇದರಿಂದಾಗಿ ಖಾತಾ ಪಡೆದಿರುವ ವ್ಯಕ್ತಿ, ರಸ್ತೆಯಲ್ಲಿ ಇದೀಗ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದರಿಂದ ರಸ್ತೆ ನಂಬಿ ಕೊಂಡಿದ್ದ ಅಕ್ಕಪಕ್ಕದ ಕಟ್ಟಡಗಳ ಮಾಲೀಕರಿಗೆ ಸಮಸ್ಯೆ ಎದುರಾಗುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಎನ್.ಜಿ. ಮೋಹನ್‌ಕುಮಾರ್ ರೆಡ್ಡಿ, ಲೇಔಟ್ ರಚನೆಯಾದಾಗಿನಿಂದಲೂ 30 ಅಡಿಯಿದೆ. ಈವರೆಗೆ ಅದನ್ನು ನಾವೆಲ್ಲ ಬಳಸುತ್ತಿದ್ದೆವು. ಆದರೀಗ, ಆ ರಸ್ತೆಯ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಬಿ ಖಾತಾ ಮಾಡಿಕೊಡಲಾಗಿದೆ. ಇದರಿಂದಾಗಿ ಅಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ಸಮರ್ಪಕ ಉತ್ತರ ನೀಡುತ್ತಿಲ್ಲ. ಕೂಡಲೇ ಬಿ ಖಾತಾ ರದ್ದು ಮಾಡಿ, ಸಾರ್ವನಿಕ ಬಳಕೆಗೆ ರಸ್ತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.