ಠೇವಣಿದಾರರಿಗೆ ಇನ್ನೂ ದೊರೆಯದ ಪರಿಹಾರ

| Published : Apr 17 2024, 01:15 AM IST

ಸಾರಾಂಶ

ದಂಡಾಧಿಕಾರಿಗಳು ಆದಷ್ಟು ಶೀಘ್ರ ಪಿರ್ಯಾದಿನ ಜೊತೆಗೆ ತಮ್ಮ ವರದಿಯನ್ನು ಸರ್ಕಾರಕ್ಕೆ ಕಳುಹಿಸಬಹುದು. ಆದೇಶದ ಪ್ರಕಟಣೆಯ ನಂತರ ಹಣಕಾಸು ಸಂಸ್ಥೆ ಮತ್ತು ಅದರಲ್ಲಿ ಹೇಳಿದ ವ್ಯಕ್ತಿಗಳ ಎಲ್ಲಾ ಸ್ವತ್ತುಗಳು ಮತ್ತು ಆಸ್ತಿಗಳು ವಿಶೇಷ ನ್ಯಾಯಾಲಯಿಂದ ಮುಂದಿನ ಆದೇಶ ಬರುವವರೆಗೆ ಸರ್ಕಾರ ನೇಮಕ ಮಾಡಿದ ಸಕ್ಷಮ ಪ್ರಾಧಿಕಾರದಲ್ಲಿ ನಿಹಿತಮಾಡಬಹುದು

ಕನ್ನಡಪ್ರಭ ವಾರ್ತೆ ಮೈಸೂರು

ಕಳೆದ 12 ವರ್ಷಗಳಿಂದಲೂ ಸತತ ಹೋರಾಟ ನಡೆಸುತ್ತಿದ್ದರೂ ನಗರದ ಚಾಣಕ್ಯ ಫೈನಾನ್ಸ್‌ ಠೇವಣಿದಾರರಿಗೆ ಇನ್ನೂ ಪರಿಹಾರ ದೊರೆತಿಲ್ಲ,

ಠೇವಣಿಗಳನ್ನು ಹಿಂದಿರುಗಿಸಲು ತಪ್ಪಿದಲ್ಲಿ ಸರ್ಕಾರ ಅಥವಾ ಜಿಲ್ಲಾ ದಂಡಾಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸ್ವತ್ತುಗಳನ್ನು ಜಪ್ತಿ ಮಾಡಬಹುದು. ಸ್ವಪ್ರೇರಣೆಯಿಂದ ಅಥವಾ ಪಿರ್ಯಾದು ಸ್ವೀಕರಿಸಿದ ನಂತರ ತನಿಖೆ ನಡೆಸಬಹುದು. ದಂಡಾಧಿಕಾರಿಗಳು ಆದಷ್ಟು ಶೀಘ್ರ ಪಿರ್ಯಾದಿನ ಜೊತೆಗೆ ತಮ್ಮ ವರದಿಯನ್ನು ಸರ್ಕಾರಕ್ಕೆ ಕಳುಹಿಸಬಹುದು. ಆದೇಶದ ಪ್ರಕಟಣೆಯ ನಂತರ ಹಣಕಾಸು ಸಂಸ್ಥೆ ಮತ್ತು ಅದರಲ್ಲಿ ಹೇಳಿದ ವ್ಯಕ್ತಿಗಳ ಎಲ್ಲಾ ಸ್ವತ್ತುಗಳು ಮತ್ತು ಆಸ್ತಿಗಳು ವಿಶೇಷ ನ್ಯಾಯಾಲಯಿಂದ ಮುಂದಿನ ಆದೇಶ ಬರುವವರೆಗೆ ಸರ್ಕಾರ ನೇಮಕ ಮಾಡಿದ ಸಕ್ಷಮ ಪ್ರಾಧಿಕಾರದಲ್ಲಿ ನಿಹಿತಮಾಡಬಹುದು.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ. 2004-2005ಕ ಕರ್ನಾಟಕ ಅಧಿನಿಯಮ ಸಂಖ್ಯೆ 30 ರಲ್ಲಿ ಮೇಲಿನಂತೆ ಸೂಚಿಸಿದ್ದರೂ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಈ ಬಗ್ಗೆ ಹೋರಾಟ ನಡೆಸುತ್ತಿರುವ ಅಖಿಲ ಕರ್ನಾಟಕ ಅರಸು ಪರಿಷತ್‌ನ ಕಾರ್ಯದರ್ಶಿ ಬಿ. ಮೋಹನ್‌ ದೇಶರಾಜೇ ಅರಸ್‌ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು, ನ್ಯಾಯಾಲಯದ ಆದೇಶಗಳನ್ನು ನೀಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿರಲಿಲ್ಲ. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯಲಾಗಿದ್ದು. ಇದಾದ ಎರಡನೇ ದಿನದಲ್ಲಿ ಜಿಲ್ಲಾಡಳಿತ ಹುಣಸೂರು ಉಪ ವಿಭಾಗಾಧಿಕಾರಿಯನ್ನು ಸಮಕ್ಷ ಪ್ರಾಧಿಕಾರಿಯನ್ನಾಗಿ ನೇಮಿಸಿತು. ನಾನಾ ಕಾರಣಗಳಿಂದ ನಾಲ್ಕು ಬಾರಿ ಸಕ್ಷಮ ಪ್ರಾಧಿಕಾರ ಅಧಿಕಾರಿಯನ್ನು ಬದಲಿಸಲಾಗಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎಂದು ಅವರು ವಿಷಾದಿಸಿದ್ದಾರೆ.

ಠೇವಣಿದಾರರ ಹಿತ ಕಾಪಾಡಲು ಅವಕಾಶವಿದ್ದರೂ ಅದಕ್ಕೆ ಬೇಕಾದ ಸೂಕ್ತ ದಾಖಲಾತಿಗಳನ್ನು ಒದಗಿಸಿಲ್ಲ. ಈ ಸಂಬಂಧ ಮಧ್ಯಂತರ ವರದಿಯನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಸಲ್ಲಿಸಿದೆ.ರಾಜ್ಯ ಹೈಕೋರ್ಟ್‌ ಆದೇಶವಿದ್ದರೂ ಸಮಯ ವ್ಯರ್ಥ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈಗಲಾದರೂ ಕ್ರಮಕೈಗೊಂಡು, ಠೇವಣಿದಾರರಿಗೆ ನ್ಯಾಯ ದೊರಕಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.