ಗುಂಟಾ ಪ್ಲಾಟ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್‌

| Published : Feb 26 2025, 01:07 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಗುಂಟಾ ಪ್ಲಾಟ್ ಪಡೆದವರು ಬಡವರು, ಅವರಿಗೆ ತೊಂದರೆ ನೀಡುವುದಿಲ್ಲ, ಆದರೆ ಗುಂಟಾ ಪ್ಲಾಟ್ ಹಾಕಿ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಗ್ರಾಮಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು, ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್ ಮೊದಲಾದವುಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗುಂಟಾ ಪ್ಲಾಟ್ ಪಡೆದವರು ಬಡವರು, ಅವರಿಗೆ ತೊಂದರೆ ನೀಡುವುದಿಲ್ಲ, ಆದರೆ ಗುಂಟಾ ಪ್ಲಾಟ್ ಹಾಕಿ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ 2024-25ನೇ 2ನೇ ಹಾಗೂ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈಗ ಒಂದೇ ಬಾರಿ( ಒನ್ ಟೈಂ) ಎಂದು ಸರ್ಕಾರ ಗುಂಟಾ ಪ್ಲಾಟ್ ಸಕ್ರಮಗೊಳಿಸಲು ಮುಂದಾಗಿದೆ. ಆದರೆ ಇದು ಕೊನೆಯಾಗಬೇಕು. ಎಲ್ಲ ರೀತಿ ಸೌಕರ್ಯ ಕಲ್ಪಿಸುವ ಲೇಔಟ್ ನಿರ್ಮಾಣದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾವೇಕೆ ಎಲ್ಲ ಪ್ರಕ್ರಿಯೆ ಪೂರೈಸಬೇಕು. ಗುಂಟಾ ಪ್ಲಾಟ್ ಪಡೆದುಕೊಂಡವರು ಬಡವರು, ಹೀಗಾಗಿ ಅವರಿಗೆ ತೊಂದರೆ ನೀಡುವುದು ನಮ್ಮ ಉದ್ದೇಶವಿಲ್ಲ ಎಂದರು.ಭೂ ಪರಿವರ್ತನೆ ಶುಲ್ಕ ಕಟ್ಟದೇ ನಿಯಮಾವಳಿ ಮೀರಿ ಗುಂಟಾ ಪ್ಲಾಟ್ ಮಾಡಿ ಮಾರಾಟ ಮಾಡುವ ಮಾಫಿಯಾದವರ ಮೇಲೆ ನಮಗೆ ಆಕ್ಷೇಪವಿದೆ. ಹೀಗಾಗಿ ಈ ರೀತಿ ಗುಂಟಾ ಲೇಔಟ್ ನಿಲ್ಲಬೇಕು, ಈ ರೀತಿಯಾಗಿ ಲೇಔಟ್ ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ, ಸರ್ಕಾರಕ್ಕೂ ಸಹ ಪ್ರಸ್ತಾವನೆ ಸಲ್ಲಿಸಿ. ಬಡವರಿಗೆ ಅನುಕೂಲವಾಗಲಿ ಎಂದು ಬಿ-ಖಾತಾ ನೋಂದಣಿ ಆರಂಭಿಸಿದೆ. ಬಹುಮುಖ್ಯವಾಗಿ ರಾಜಕಾಲುವೆ, ಐತಿಹಾಸಿಕ ಸ್ಮಾರಕ ಒತ್ತುವರಿ ಮಾಡಿಕೊಂಡವನ್ನು ಬಿ-ಖಾತಾ ನೀಡುವ ಕೆಲಸ ಮಾಡಬೇಡಿ, ಈ ಬಗ್ಗೆ ಒಂದು ಸೂಕ್ತವಾದ ಚೆಕ್ ಲಿಸ್ಟ್ ಮಾಡಿ ಎಂದು ನಿರ್ದೇಶನ ನೀಡಿದರು.

ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಗುಂಟಾ ಪ್ಲಾಟ್ ನೋಂದಣಿಗೆ ಸಂಬಂಧಿಸಿದಂತೆ ಬಿ-ಖಾತಾ ನೀಡುವ ಪ್ರಕ್ರಿಯೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಿರಾಣಿ ಅಂಗಡಿಗಳಲ್ಲಿ ಮದ್ಯ:

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟದ ಬಗ್ಗೆ ಗಮನ ಹರಿಸಲು ಸೂಚಿಸಿದ್ದೆ, ಅಂಕಿ ಅಂಶ ಹೇಳಬೇಡಿ ವಾಸ್ತವಿಕ ನೆಲೆಗಟ್ಟಿನಲ್ಲಿ ಹೇಳಿ ಎಂದು ಸಚಿವ ಪಾಟೀಲ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು. ನಿಮಗೆ ಎಲ್ಲ ಗೊತ್ತಿದೆ, ಕೆಲವು ಅಬಕಾರಿ ಇಲಾಖೆ ಅಧಿಕಾರಿಗಳೇ ಅಕ್ರಮ ಮದ್ಯ ಮಾರಾಟಗಾರರಿಗೆ ಮಾಹಿತಿ ನೀಡಿ ನಾವು ರೇಡ್ ಮಾಡುತ್ತಿದ್ದೇವೆ, ಖಾಲಿ ಮಾಡಿ ಎಂದು ಹೇಳುತ್ತಾರೆ. ರೇಡ್ ಮಾಡಿದ್ರು ಸಿಕ್ಕಿಲ್ಲ ಸರ್ ಎಂದು ಹೇಳುತ್ತಾರೆ.

ಇದರ ಹಿಂದೆ ಯಾರಿದ್ದಾರೆ ನನಗೆ ಗೊತ್ತಿದೆ, ಅಬಕಾರಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.ನಕಲಿ ಸ್ಪೀರಿಟ್ ಮಾರಾಟ ಜಿಲ್ಲೆಯಲ್ಲಿ ಆತಂಕದ ಸಂಗತಿ, ಇದನ್ನು ಸಂಪೂರ್ಣವಾಗಿ ಮಟ್ಟ ಹಾಕಿ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಆಗ ಸ್ಪಷ್ಟನೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಅಕ್ರಮ ಮದ್ಯ ಮಾರಾಟ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಸಂತೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು, ಅದನ್ನು ದಾಳಿ ನಡೆಸಿ ತಡೆಗಟ್ಟಲಾಗಿದೆ ಎಂದು ತಿಳಿಸಿದರು.

ಚೈನ್ನೈ ಮಾದರಿಯಲ್ಲಿ ಮೊಸಳೆ ಪಾರ್ಕ್ಚೆನ್ನೈನ ಮೊಸಳೆ ಪಾರ್ಕ್ ಮಾದರಿಯಲ್ಲಿ ಇಲ್ಲಿಯೂ ಮೊಸಳೆ ಪಾರ್ಕ್ ನಿರ್ಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ಈ ಬಗ್ಗೆ ವಿವರಣೆ ನೀಡಿದ ಅರಣ್ಯಾಧಿಕಾರಿಗಳು, ಮೊಸಳೆ ಪಾರ್ಕ್ ನಿರ್ಮಾಣದಿಂದ ಮೊಸಳೆ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ, ಈ ಹಿಂದೆ ತಜ್ಞರ ಜೊತೆ ಸಮಾಲೋಚಿಸಿ ಮೊಸಳೆ ಪಾರ್ಕ್ ನಿರ್ಮಾಣಕ್ಕೆ ನಾಟ್ ಫಾಸಿಬಲ್ ಎಂದು ವರದಿ ನೀಡಿದ್ದಾರೆ. ಚೆನ್ನೈನಲ್ಲಿ ಈ ರೀತಿ ಉದ್ಯಾನವನ ಇದೆ ಎಂದಾಗ ಆ ಉದ್ಯಾನನವನ್ನು ವೀಕ್ಷಣೆ ಮಾಡಬೇಕು ಎಂದರು.ಶಾಸಕರಾದ ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ಕೇಶವ ಪ್ರಸಾದ್, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಎಸ್.ಪಿ. ಲಕ್ಷ್ಮಣ ನಿಂಬರಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ ಮುಂತಾದವರು ಇದ್ದರು.ಬಾಕ್ಸ್‌ಖರೀದಿ ಕೇಂದ್ರಕ್ಕೆ ಬರದ ಜೋಳವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜೋಳ ಬೆಳೆಯಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತಲೂ ಎಂಎಸ್‌ಪಿ ದರ ಹೆಚ್ಚಾಗಿದ್ದರೂ ಸಹ ಜೋಳ ಖರೀದಿ ಕೇಂದ್ರದಲ್ಲಿ ಒಬ್ಬನೇ ಒಬ್ಬ ರೈತರು ನೋಂದಣೆ ಮಾಡಿಲ್ಲ. ಒಂದು ಕ್ವಿಂಟಾಲ್ ಜೋಳ ಸಹ ಖರೀದಿ ಕೇಂದ್ರಕ್ಕೆ ಬಂದಿಲ್ಲ ಎಂಬ ಗಂಭೀರ ವಿಷಯವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಭೆಯ ಗಮನಕ್ಕೆ ತಂದರು. ಈ ಕುರಿತು ವಿಷಯ ಪ್ರಸ್ತಾಪಿಸಿ ರೈತರಿಗೆ ಆಗುತ್ತಿರುವ ಹಾನಿಯ ಕುರಿತು ಎಳೆ ಎಳೆಯಾಗಿ ಬಿಡಿಸಿಟ್ಟರು. ನೆರೆಯ ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ದೊಡ್ಡ ಪ್ರಮಾಣದಲ್ಲಿ ಜೋಳ ಖರೀದಿ ಕೇಂದ್ರಕ್ಕೆ ಬರುತ್ತಿದೆ. ಆಂಧ್ರ ಪ್ರದೇಶದ ಜಾಲವೊಂದು ರೈತರ ಹೆಸರಿನಲ್ಲಿ ಜೋಳ ಮಾರಾಟ ಮಾಡುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗಬೇಕೆ? ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರವಿದ್ದರೂ ರೈತರು ಖರೀದಿ ಕೇಂದ್ರಕ್ಕೆ ಜೋಳ ಮಾರುತ್ತಿಲ್ಲ ಎಂದರು.ಈ ವಿಷಯವಾಗಿ ಸಚಿವ ಡಾ.ಎಂ.ಬಿ. ಪಾಟೀಲ ಮಾತನಾಡಿ, ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರವಿದ್ದರೂ ಸಹ ಏಕೆ ರೈತರು ಖರೀದಿ ಕೇಂದ್ರಕ್ಕೆ ಧಾವಿಸುತ್ತಿಲ್ಲ, ಇದಕ್ಕೆ ಯಾರು ಹೊಣೆ? ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಾಗೃತಿ ಮೂಡಿಸಿ ಎಂದರು.