ನಿಲ್ದಾಣದ ಆಧುನೀಕರಣಕ್ಕೆ ₹ 26.56 ಕೋಟಿ ವೆಚ್ಚ ಮಾಡಲಾಗಿದ್ದು, ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆವರೆಗೆ ಸುಮಾರು ₹ 100 ಕೋಟಿ ವೆಚ್ಚದಲ್ಲಿ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಯಶವಂತಪುರದಿಂದ ಬೆಳಿಗ್ಗೆ 7.35ಕ್ಕೆ ಹೊರಡುವ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದ್ದು, ಬೆಳಿಗ್ಗೆ 10ರಿಂದ 10.30ರ ವೇಳೆಗೆ ಸಕಲೇಶಪುರ ತಲುಪಲಿದೆ. ರಾತ್ರಿ 8.30ರ ಸುಮಾರಿಗೆ ಗೋವಾದ ಮಡಗಾಂವ್ ತಲುಪುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಗೋವಾಕ್ಕೆ ಸುಮಾರು 12ರಿಂದ 13 ಗಂಟೆಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದ್ದು, ವಿಮಾನ ಪ್ರಯಾಣಕ್ಕಿಂತ ಕಡಿಮೆ ವೆಚ್ಚದಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿಗೂ ವಂದೇ ಭಾರತ್ ರೈಲು ಸೇವೆ ದೊರೆಯುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಡೆದ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವುದು ವಿಮಾನ ಪ್ರಯಾಣದ ಅನುಭವ ನೀಡುತ್ತದೆ. ಮಕ್ಕಳು ಹಾಗೂ ಯುವಜನರು ಅತ್ಯಾಧುನಿಕ ರೈಲು ವ್ಯವಸ್ಥೆಯಲ್ಲಿ ಪ್ರಯಾಣಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ವಿಚಾರ ಎಂದರು. ವಿದೇಶ ಪ್ರವಾಸದ ವೇಳೆ ಪ್ಯಾರಿಸ್‌ನಿಂದ ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಕ್‌ಗೆ ರೈಲಿನಲ್ಲಿ ಪ್ರಯಾಣಿಸಿದಾಗ ಇಂತಹ ಅತ್ಯಾಧುನಿಕ ರೈಲು ವ್ಯವಸ್ಥೆ ನಮ್ಮ ದೇಶದಲ್ಲೂ ಯಾವಾಗ ಬರಲಿದೆ ಎಂಬ ಕನಸು ನನಸಾದ ದಿನವಿಂದು ಎಂದು ಹೇಳಿದರು. ಬ್ರಿಟೀಷರ ಕಾಲದ ಇತಿಹಾಸ ಹೊಂದಿರುವ ಸಕಲೇಶಪುರ ರೈಲ್ವೆ ನಿಲ್ದಾಣವು ಆಧುನಿಕ ಸೌಲಭ್ಯಗಳೊಂದಿಗೆ ಸುಂದರವಾಗಿ ರೂಪುಗೊಂಡಿದೆ. ನಿಲ್ದಾಣದ ಆಧುನೀಕರಣಕ್ಕೆ ₹ 26.56 ಕೋಟಿ ವೆಚ್ಚ ಮಾಡಲಾಗಿದ್ದು, ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆವರೆಗೆ ಸುಮಾರು ₹ 100 ಕೋಟಿ ವೆಚ್ಚದಲ್ಲಿ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಯಶವಂತಪುರದಿಂದ ಬೆಳಿಗ್ಗೆ 7.35ಕ್ಕೆ ಹೊರಡುವ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದ್ದು, ಬೆಳಿಗ್ಗೆ 10ರಿಂದ 10.30ರ ವೇಳೆಗೆ ಸಕಲೇಶಪುರ ತಲುಪಲಿದೆ. ರಾತ್ರಿ 8.30ರ ಸುಮಾರಿಗೆ ಗೋವಾದ ಮಡಗಾಂವ್ ತಲುಪುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಗೋವಾಕ್ಕೆ ಸುಮಾರು 12ರಿಂದ 13 ಗಂಟೆಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದ್ದು, ವಿಮಾನ ಪ್ರಯಾಣಕ್ಕಿಂತ ಕಡಿಮೆ ವೆಚ್ಚದಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ವಿಕಸಿತ ಭಾರತದ ಸಂಕಲ್ಪದೊಂದಿಗೆ ದೇಶ ಪ್ರಗತಿಯತ್ತ ಸಾಗುತ್ತಿದ್ದು, ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಪ್ರಧಾನಿ ಹಾಗೂ ರೈಲ್ವೆ ಇಲಾಖೆಗೆ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆಯ ಶಮದ್ ಹಮೀದ್, ಬಿಜೆಪಿ ಮುಖಂಡ ರಾಮಚಂದ್ರೇಗೌಡ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ನಾರಾಯಣ ಆಳ್ವ, ರಘು, ರಾಜ್‌ಕುಮಾರ್, ಬಬಿತಾ ವಿಶ್ವನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೆಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ಇಂಟರ್‌ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ರೈಲು ನಿಲುಗಡೆಗೆ ಹೆಚ್ಚುವರಿ ಟ್ರ್ಯಾಕ್ ಅಗತ್ಯವಿದ್ದು, ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.