ಸಾರಾಂಶ
- ಕೊಳ್ಳೆ ಹೊಡೆಯಲೆಂದೇ ಅಧಿಕಾರಕ್ಕೆ ಬಂದ ಸರ್ಕಾರ: ಶ್ರೀನಿವಾಸ ದಾಸಕರಿಯಪ್ಪ ಆಕ್ರೋಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹87 ಕೋಟಿ ಹಣ ದುರುಪಯೋಗವಾಗಿದೆ. ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳು ಡೆತ್ ನೋಟ್ ಬರೆದಿಟ್ಟು, ಸಾವಿಗೆ ಶರಣಾಗುವಂತಹ ದುಸ್ಥಿತಿ ಬಂದೊದಗಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ನಾಯಕ ಸಮಾಜದ ಯುವ ಮುಖಂಡ ಶ್ರೀನಿವಾಸ ಟಿ. ದಾಸಕರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಧಿಕಾರಿಗಳ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯಗಳು ಹೆಚ್ಚುತ್ತಿದೆ. ಕೊಳ್ಳೆ ಹೊಡೆಯಲೆಂದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಲೂಟಿ ಜೊತೆಗೆ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ಜೀವವನ್ನೂ ಬಲಿ ಪಡೆಯುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಪ್ರಾಮಾಣಿಕ ಅಧಿಕಾರಿಗಳ ಬದುಕುವ ಭಾಗ್ಯವನ್ನೇ ಕಸಿಯುತ್ತಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಓರ್ವ ದಕ್ಷ ಅಧಿಕಾರಿ ತಮ್ಮ ಸಾವಿಗೆ ಸಚಿವ ನಾಗೇಂದ್ರ ಕಾರಣ ಎಂಬುದಾಗಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈವರೆಗೂ ಸಿಎಂ ಸಚಿವರ ರಾಜಿನಾಮೆ ಪಡೆಯುವುದಿರಲಿ, ಕುಟುಂಬಕ್ಕೆ ಆಸರೆಯಾಗಿದ್ದ ಅಧಿಕಾರಿಯನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನವೂ ಹೇಳಿಲ್ಲ. ಅಧಿಕಾರಿಯ ಕುಟುಂಬಕ್ಕೆ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ಸಿನ ಯಾವೊಬ್ಬ ಜನಪ್ರತಿನಿಧಿ, ನಾಯಕರು ಸಹ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ 3-4 ಅಧಿಕಾರಿಗಳನ್ನು ಅಮಾನತುಪಡಿಸಿದರೆ ಸಾಲದು. ತಕ್ಷಣವೇ ಸಚಿವ ನಾಗೇಂದ್ರ ರಾಜಿನಾಮೆ ಪಡೆಯಬೇಕು. ಸಂಪುಟದಿಂದ ವಜಾ ಮಾಡಿ, ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಲಿ ಎಂದರು.ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಚಿವ ನಾಗೇಂದ್ರ ರಾಜಿನಾಮೆ ಪಡೆಯಬೇಕು. ನಿಗಮದ ಭ್ರಷ್ಟಾಚಾರ, ಹಗರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪಾಲು ಎಷ್ಟು ಎಂಬ ಬಗ್ಗೆಯೂ ತನಿಖೆ ಆಗಬೇಕು. ದಕ್ಷ, ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿ ಸಾವಿನ ಪ್ರಕರಣದ ಹಿಂದೆ ಕೇವಲ ಒಬ್ಬ ಸಚಿವನಲ್ಲ. ಅನೇಕ ಸಚಿವರ ಕೈವಾಡ ಇರುವ ಶಂಕೆ ಇದೆ. ಹಣಕಾಸು ಇಲಾಖೆ ನಿಯಮಗಳನ್ನೆಲ್ಲಾ ಬದಿಗಿಟ್ಟು, ಬ್ಯಾಂಕ್ ಖಾತೆಯಿಂದಲೇ ಆರ್ಥಿಕ ಚಟುವಟಿಕೆ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಯಾರು ಎಂದು ಶ್ರೀನಿವಾಸ ದಾಸಕರಿಯಪ್ಪ ಪ್ರಶ್ನಿಸಿದರು.
ಮುಖಂಡರಾದ ತ್ಯಾವಣಿಗೆ ಕೃಷ್ಣಕುಮಾರ, ದುರುಗೇಶ, ಸಾಲಕಟ್ಟೆ ಸಿದ್ದಪ್ಪ, ಲೋಕೇಶಪ್ಪ, ತ್ಯಾವಣಿಗೆ ರಮೇಶ, ಹೊಸಹಳ್ಳಿ ವೆಂಕಟೇಶ, ರಾಜು ಆಳಗೋಡಿ ಇತರರು ಇದ್ದರು.- - - ಬಾಕ್ಸ್
15 ಜನ ಎಸ್‌ಟಿ ಮಂತ್ರಿ, ಶಾಸಕರ ಮೌನವೇಕೆ?ಸರ್ಕಾರದ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳಲ್ಲಿರಿಸುವ ಹಣವನ್ನು ಪಿಡಿ ಖಾತೆಯಿಂದಲೇ ನಿರ್ವಹಿಸುವಂತೆ ಸ್ಪಷ್ಟ ನಿರ್ದೇಶನವಿದೆ. ಹಾಗಿದ್ದರೂ ಇಂತಹ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಅಧಿಕಾರಿಗೆ ನಿರ್ದೇಶನ ನೀಡಿದ ಕಾಣದ ಕೈಗಳು ಯಾರದ್ದು? ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಗೆದ್ದ 15 ಶಾಸಕರು, ಮಂತ್ರಿಗಳು ಈವರೆಗೆ ಈ ವಿಚಾರದ ಬಗ್ಗೆ ಧ್ವನಿ ಎತ್ತಿಲ್ಲ ಎಂದು ನಿವಾಸ ಟಿ. ದಾಸಕರಿಯಪ್ಪ ತಿಳಿಸಿದ್ದಾರೆ.
- - --(ಫೋಟೋ ಇದೆ.)