ಸಾರಾಂಶ
ಕಾರಣ ಹುಣ್ಣಿಮೆ ನಿಮಿತ್ತ ಅಂಕಲಗಿಯಲ್ಲಿ ಎತ್ತಿನ ಬದಲಿಗೆ ಯುವಕರೇ ಕರಿ ಹರಿಯುವ ವಿಶಿಷ್ಟ ಸಂಪ್ರದಾಯ ಆಚರಣೆಯಲ್ಲಿದೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಸಾಮಾನ್ಯವಾಗಿ ಕಾರಣ ಹುಣ್ಣಿಮೆಯಂದು ರೈತರು ಎತ್ತುಗಳ ಮೂಲಕ ಕರಿ ಹರಿಯುವ ಆಚರಣೆ ಎಲ್ಲೆಡೆ ಕಾಣುತ್ತೇವೆ. ಆದರೆ, ಅಂಕಲಗಿಯಲ್ಲಿ ಮಾತ್ರ ಎತ್ತಿನ ಬದಲಿಗೆ ಜನರೇ ಕರಿ ಹರಿಯುವ ವಿಶಿಷ್ಟ ಸಂಪ್ರದಾಯ ಹಿಂದಿನಿಂದಲೂ ಆಚರಣೆಯಲ್ಲಿದೆ. ವಿವಾಹಿತ ಯುವಕರು ಓಡಿಸಿ ಕರಿ ಹರಿಯುತ್ತಾರೆ.ಆಚರಣೆ ಹಿನ್ನೆಲೆ: ಅನೇಕ ವರ್ಷಗಳ ಹಿಂದೆ ಊರಿನಲ್ಲಿ ಎತ್ತುಗಳ ಕರಿ ಹರಿಯುವ ಸಂದರ್ಭದಲ್ಲಿ ಕರಿ ಹರಿದ ಎತ್ತು ಊರವರ ಯಾರ ಕೈಗೂ ಸಿಗದೆ ತಪ್ಪಿಸಿಕೊಂಡು ಬೇರೆ ಊರಿಗೆ ಹೋಯಿತಂತೆ, ಅಂದಿನಿದ ಈ ಊರಿನಲ್ಲಿ ಎತ್ತುಗಳಿಂದ ಕರಿ ಹರಿಯುವುದು ನಿಂತು ಹೊಸದಾಗಿ ಮದುವೆಯಾದ ಯುವಕರಿಗೆ ಧವಸ ದಾನ್ಯಗಳ ಹೆಸರಿಟ್ಟು ಕರಿ ಹರಿಯುವ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಹಿರಿಯ ಕೆ.ಎಲ್. ಬಿಲಕೇರಿ ಹಾಗೂ ಟಿ.ಆರ್. ಪರಚನಗೌಡರ.
ಕರಿ ಹರಿದ ಯುವಕ: ಐವರು ಯುವಕರಿಗೆ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಹೆಸರಿಟ್ಟು ತಲೆಗೆ ಹಳದಿ ಪಟಗಾ ಸುತ್ತಿ ಲಕ್ಷ್ಮೀದೇವಿ ದೇವಸ್ಥಾನದಿಂದ ಊರ ಅಗಸಿಯವರೆಗೆ ಕರಿ ಹರಿಯಲು ಓಡಿದರು. ಹನುಮಂತ ಮಾರಂಗಪ್ಪನವರ (ಮುಂಗಾರು ಜೋಳ), ಗಿರೀಶ ಬಿಲಕೇರಿ (ಗೋದಿ), ಹೊಳಬಸು ಹಳಬರ(ಶೇಂಗಾ), ಲಕ್ಷ್ಮಣ ಸೋಮವ್ವಗೊಳ(ಜೊಳ), ಹನುಮಂತ ಲಿಂಬಾಳ್ಕರ್ (ಸಜ್ಜಿ) ಬೆಳೆಗಳ ಹೆಸರುಗಳನ್ನು ಇಟ್ಟು ಕರಿ ಹರಿಯಲು ಊರ ಅಗಸಿ ವರೆಗೆ ಓಡಿಸಲಾಯಿತು, ಗೋದಿ ಬೆಳೆ ಹೆಸರು ಇಟ್ಟ ಗಿರೀಶ ಬಿಲಕೇರಿ (ಗೋದಿ) ಮೊದಲು ತಲುಪಿ ಕರಿ ಹರಿದ ಕಾರಣ ಈ ಬಾರಿ ಹಿಂಗಾರು ಬೆಳೆ ಹುಲುಸಾಗಿ ಬರಲಿದೆ ಎಂಬುದು ಗ್ರಾಮಸ್ಥರ ನಂಬಿಕೆ.