ಕನ್ನಡಪ್ರಭ ವಾರ್ತೆ ಅರಸೀಕೆರೆ
ಭಾರತದ ಸಾಂಸ್ಕೃತಿಕ ವೈಭವ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪುರಾತನ ಸ್ಮಾರಕಗಳು ಮಹತ್ವದ ಪಾತ್ರ ವಹಿಸುತ್ತವೆ. ಅವುಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸ್ಮಾರಕಗಳನ್ನು ಉಳಿಸಿದಾಗ ಮಾತ್ರ ನಮ್ಮ ಭವ್ಯ ಪರಂಪರೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಇತಿಹಾಸ ತಜ್ಞ ಹಾಗೂ ಸಂಶೋಧಕ ಶಶಿಧರ್ ಅಭಿಪ್ರಾಯಪಟ್ಟರು.ಬೆಂಗಳೂರಿನ ಆರ್‌ಜಿವಿಕೆ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ಹೊಯ್ಸಳ ಪಾರಂಪರಿಕ ಪ್ರವಾಸದ ಅಂಗವಾಗಿ ನಗರದ ಹೊಯ್ಸಳರ ಕಾಲದ ಶ್ರೀ ಚಂದ್ರಮೌಳೀಶ್ವರ ದೇವಾಲಯ ಹಾಗೂ ಸಹಸ್ರಕೂಟ ಜೀನಾಲಯ ಸ್ಮಾರಕಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಅರಸೀಕೆರೆ ತಾಲೂಕು ಹೊಯ್ಸಳರು, ಚಾಲುಕ್ಯರು, ಕದಂಬರು ಸೇರಿದಂತೆ ಹಲವು ರಾಜವಂಶಗಳ ಆಡಳಿತಕ್ಕೆ ಸಾಕ್ಷಿಯಾಗಿದ್ದು, ಈ ಭಾಗದಲ್ಲಿ ಅನೇಕ ಅಪರೂಪದ ದೇವಾಲಯಗಳು, ಜೀನಾಲಯಗಳು ಮತ್ತು ಶಿಲ್ಪಕಲೆಯ ಸ್ಮಾರಕಗಳು ನಿರ್ಮಾಣವಾಗಿವೆ. ಹೊಯ್ಸಳರ ಕಾಲದಲ್ಲಿ ಮಾತ್ರವೇ ಸುಮಾರು 125ಕ್ಕೂ ಹೆಚ್ಚು ಸ್ಮಾರಕಗಳು ನಿರ್ಮಾಣಗೊಂಡಿದ್ದು, ಹಾರನಹಳ್ಳಿ, ಹುಲ್ಲೇಕೆರೆ, ಹಿರಿಯೂರು, ಅರಕೆರೆ, ಜಾವಗಲ್, ಬೆಳವಾಡಿ, ಹಳೇಬೀಡು ಹಾಗೂ ಹುಲಿಕೆರೆ ಪ್ರದೇಶಗಳಲ್ಲಿ ಅದ್ಭುತ ವಾಸ್ತುಶಿಲ್ಪದ ದರ್ಶನ ಪಡೆಯಬಹುದು ಎಂದು ಹೇಳಿದರು.ಅರಸೀಕೆರೆಯ ಹೊಯ್ಸಳರ ಕಾಲದ ಶಿವಾಲಯ ವಿಶಿಷ್ಟ ತಂತ್ರಜ್ಞಾನ ಮತ್ತು ಅಪೂರ್ವ ಶಿಲ್ಪಕಲೆಯಿಂದ ನಿರ್ಮಾಣವಾಗಿದ್ದು, ಅಧ್ಯಯನ ಮಾಡಿದಂತೆ ಹೊಸಹೊಸ ಐತಿಹಾಸಿಕ ಮಾಹಿತಿಗಳು ಹೊರಬರುತ್ತವೆ. ಇಲ್ಲಿ ಮಾತ್ರವೇ ವೀರೇಶ್ವರ ಮತ್ತು ಬಕ್ಕೇಶ್ವರ ದ್ವಿಕೂಟ ದೇವಾಲಯದ ವೈಶಿಷ್ಟ್ಯ ಕಾಣಬಹುದು ಎಂದು ವಿವರಿಸಿದರು.ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳೀಯ ಸ್ಮಾರಕಗಳ ಪರಿಚಯ ಮಾಡಿಸುವ ಉದ್ದೇಶದಿಂದ ಪಾರಂಪರಿಕ ಪ್ರವಾಸಗಳನ್ನು ಆಯೋಜಿಸುವ ಅಗತ್ಯವಿದೆ. ನಮ್ಮದೇ ಊರಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸದಿದ್ದರೆ, ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.ಆರ್‌ಜಿವಿಕೆ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಟಿ. ಎನ್. ಪ್ರವೀಣ್ ಮಾತನಾಡಿ, ಕಳೆದ ಎರಡು ದಶಕಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿರುವ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ಬಸದಿಗಳು, ಕಲ್ಯಾಣಿಗಳು, ಶಿಲಾಶಾಸನಗಳು ಹಾಗೂ ವೀರಗಲ್ಲುಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.ಅಧ್ಯಕ್ಷ ಟಿ. ಸಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಕಾರ್ಯದ ಮೂಲಕ ಇತಿಹಾಸ ಮತ್ತು ಪಾರಂಪರಿಕ ತಾಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಸ್ಮಾರಕಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಿತ ಇಲಾಖೆಗಳ ಗಮನ ಸೆಳೆಯುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಡಾ. ಹರೀಶ್ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣಗಳು ಮತ್ತು ಸ್ಮಾರಕಗಳ ಕುರಿತು ಮಾಹಿತಿ ನೀಡಿದರು. ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಚಂದ್ರೇಗೌಡ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಗುರುಮೂರ್ತಿ ಜವಳಿ, ಸಹಸ್ರ ಜಿನಾಲಯ ಅಧ್ಯಕ್ಷ ಜೆ. ಕಾಂತರಾಜು, ಅಪರಾಜಿತ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹೊಯ್ಸಳರ ವೈಭವ ಉಳಿಸುವ ಹೊಣೆ ನಮ್ಮೆಲ್ಲರದ್ದು
ಅರಸೀಕೆರೆ ತಾಲೂಕು ಹೊಯ್ಸಳರು, ಚಾಲುಕ್ಯರು, ಕದಂಬರು ಸೇರಿದಂತೆ ಹಲವು ರಾಜವಂಶಗಳ ಆಡಳಿತಕ್ಕೆ ಸಾಕ್ಷಿಯಾಗಿದ್ದು, ಈ ಭಾಗದಲ್ಲಿ ಅನೇಕ ಅಪರೂಪದ ದೇವಾಲಯಗಳು, ಜೀನಾಲಯಗಳು ಮತ್ತು ಶಿಲ್ಪಕಲೆಯ ಸ್ಮಾರಕಗಳು ನಿರ್ಮಾಣವಾಗಿವೆ. ಹೊಯ್ಸಳರ ಕಾಲದಲ್ಲಿ ಮಾತ್ರವೇ ಸುಮಾರು 125ಕ್ಕೂ ಹೆಚ್ಚು ಸ್ಮಾರಕಗಳು ನಿರ್ಮಾಣಗೊಂಡಿದ್ದು, ಹಾರನಹಳ್ಳಿ, ಹುಲ್ಲೇಕೆರೆ, ಹಿರಿಯೂರು, ಅರಕೆರೆ, ಜಾವಗಲ್, ಬೆಳವಾಡಿ, ಹಳೇಬೀಡು ಹಾಗೂ ಹುಲಿಕೆರೆ ಪ್ರದೇಶಗಳಲ್ಲಿ ಅದ್ಭುತ ವಾಸ್ತುಶಿಲ್ಪದ ದರ್ಶನ ಪಡೆಯಬಹುದು ಎಂದು ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.