ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಕೊಡಲು ದುಡ್ಡಿಲ್ಲ. ಕರ್ನಾಟಕ ಸರ್ಕಾರದ ಖಜಾನೆ ಖಾಲಿಯಾಗಿದೆಂದು ಹೇಳಿರುವುದು ಅಪ್ಪಟ ಸುಳ್ಳು ಎಂದು ಸಂಬಳ ಕೊಡಲು ದುಡ್ಡಿಲ್ಲವೆಂಬ ಪ್ರಧಾನಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡ ಗೋಕಾಕ ಮತ್ತು ಅರಭಾವಿ ವಿಧಾನಸಭಾ ಮತಕ್ಷೇತ್ರ ಪ್ರಜಾಧ್ವನಿ-2 ಸಮಾವೇಶ ಉದ್ಘಾಟಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ನಾವು ಸರ್ಕಾರಿ ನೌಕರರ ಸಂಬಳವನ್ನು ಎಂದಿಗೂ ನಿಲ್ಲಿಸಿಲ್ಲ. ಅಭಿವೃದ್ಧಿ ಜೊತೆಗೆ 5 ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.
ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿ ಮಾಡನಾಡುವುದಿಲ್ಲ. 2014 ಹಾಗೂ 2019ರಲ್ಲಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ಲ. ಪ್ರತಿ ಬಾರಿ ಕೇವಲ ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವಂತೆ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಸಂಪೂರ್ಣ ಹತಾಶರಾಗಿ ಹೆಚ್ಚೆಚ್ಚು ಸುಳ್ಳುಗಳನ್ನು ಹೇಳಿ ಹೇಳಿ ಎಷ್ಟು ಸಾಧ್ಯವೋ ಅಷ್ಟು ಭಾರತೀಯರನ್ನು ದಾರಿ ತಪ್ಪಿಸಿ ಲಾಭ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ದೂರಿದರು.ಗ್ಯಾರಂಟಿಗಳಿಗೆ ₹52,009 ಕೋಟಿ, ₹1,20,000 ಕೋಟಿ ಅಭಿವೃದ್ಧಿಗೆ ನೀಡಲಾಗಿದೆ. ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿಗಳನ್ನು ಜನರಿಗೆ ನೀಡಲಾಗಿದೆ. ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ₹72 ಸಾವಿರ ಕೋಟಿ ರೈತ ಸಾಲಮನ್ನಾ ಮಾಡಿದ್ದಾರೆ. ರಾಜ್ಯದಲ್ಲಿ ನಾನು ಸಿಎಂ ಆಗಿದ್ದಾಗ, 27.20 ಲಕ್ಷ ರೈತರಿಗೆ ₹8165 ಕೋಟಿ ಮೊತ್ತ ಸಾಲಮನ್ನಾ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ದೇಶದ ಜನರಿಗೆ ಸುಳ್ಳು ಹೇಳಿದ್ದಾರೆಯೇ ಎಂದು ಜನರು ವಿಚಾರ ಮಾಡಬೇಕು. ಚುನಾವಣೆ ಮೂಲಕ ಜನತೆ ಕೊಡುವ ತೀರ್ಪು ದೇಶದ ಭವಿಷ್ಯ ರೂಪಿಸಲಿದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೇ ಈ ದೇಶದ ದಲಿತರ, ಹಿಂದುಳಿದವರು, ಅಲ್ಪಸಂಖ್ಯಾತರ ಅಭಿವೃದ್ಧಿಯಾಗುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಯಾರು ಅಧಿಕಾರದಲ್ಲಿರಬೇಕೆಂದು ಜನ ತೀರ್ಮಾನ ಮಾಡಬೇಕಾಗುತ್ತದೆ. ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ದೇಶದ ಭವಿಷ್ಯವನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡಿದ್ದಾರೆಯೇ? ನುಡಿದಂತೆ ನಡೆದಿದ್ದಾರೆಯೇ? 2014ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆಯೇ? ಅಥವಾ ದೇಶದ ಜನರಿಗೆ ಸುಳ್ಳುಗಳನ್ನು ಹೇಳಿದ್ದಾರೆಯೇ? ಎನ್ನುವುದನ್ನು ವಿಚಾರ ಮಾಡಬೇಕು ಎಂದರು.ಮನಮೋಹನ್ ಸಿಂಗ್ ಕಾರ್ಯಕ್ರಮಗಳ ಶೇಯಸ್ಸು ನರೇಂದ್ರ ಮೋದಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಡೀ ದೇಶದ ರೈತರ ಸಾಲಮನ್ನಾ ಮಾಡಿದ್ದರು. ಅವರು ಈ ದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಅಧಿನಿಯಮ, ಮಾಹಿತಿ ಹಕ್ಕು ಅಧಿನಿಯಮ, ಶಿಕ್ಷಣದ ಹಕ್ಕು ಇವುಗಳನ್ನು ಜಾರಿಗೆ ತಂದವರು ಮೋಹನ್ ಸಿಂಗ್ ಅವರು. ಇದನ್ನು ಜಾರಿ ಮಾಡಿದ್ದು ನರೇಂದ್ರ ಮೋದಿ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಲಕ್ಷ್ಮಣ್ ಸವದಿ, ಶಾಸಕ ವಿ.ಕೆ.ಸಂಗಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನವಲಗಟ್ಟಿ, ಪಕ್ಷದ ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ, ಚಂದ್ರಶೇಖರ್ ಕೊಣ್ಣೂರು, ಸಿದ್ದಲಿಂಗ ದಳವಾಯಿ ಮೊದಲಾದವರು ಉಪಸ್ಥಿತರಿದ್ದರು.ಬಿಜೆಪಿಯೇತರರು ದಲಿತರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡದೇ, ಸಾಮಾಜಿಕ ನ್ಯಾಯದ ಪರವಾಗಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಮೊದಲು ಹಾಗೂ 2ನೇ ಹಂತದ ಚುನಾವಣೆಗಳಲ್ಲಿ ಬಿಜೆಪಿ, ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ. ತಮಗೆ ಸ್ಪಷ್ಟ ಸೋಲಾಗಲಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಮೋದಿಯವರು ಹತಾಶರಾಗಿದ್ದಾರೆ. ಭಯಾನಕ ಸುಳ್ಳುಗಳಿಂದ ಭಾರತೀಯರ ದಾರಿ ತಪ್ಪಿಸುತ್ತಿದ್ದಾರೆ.-ಸಿದ್ದರಾಮಯ್ಯ
, ಸಿಎಂ.