ಸಾರಾಂಶ
ನರಸಿಂಹರಾಜಪುರಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದೂ ಕೂಡ ಒಂದು ಉತ್ತಮ ಪಾಠವಾಗಿದೆ ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟರು.
- ಸೂಸಲವಾನಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಅನುಭವಾತ್ಮಕ ಕಲಿಕೆ । ಬತ್ತದ ಕೊಯ್ಲು ಮಾಡಿದ ವಿದ್ಯಾರ್ಥಿಗಳು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದೂ ಕೂಡ ಒಂದು ಉತ್ತಮ ಪಾಠವಾಗಿದೆ ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟರು.
ಶುಕ್ರವಾರ ತಾಲೂಕಿನ ಸೂಸಲವಾನಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಅನುಭವ ಆಧಾರಿತ ಕಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲಾ ಆವರಣದಲ್ಲೇ ಭತ್ತ ಬೆಳೆದಿರುವುದು ನಿಜಕ್ಕೂ ಶ್ಲಾಘನೀಯ. ಈ ಪ್ರಯೋಗ ಜಿಲ್ಲೆಯಲ್ಲಿಯೇ ಇದು ಪ್ರಥಮ ವಾಗಿದೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ಕೈ ತೋಟ ನಿರ್ಮಾಣ ಮಾಡಿ, ತರಕಾರಿ, ಹಣ್ಣು, ಸೊಪ್ಪುಗಳನ್ನು ಬೆಳೆದಿರ ಬಹುದು. ಆದರೆ, ಯಾವ ಶಾಲೆಯಲ್ಲೂ ಭತ್ತ ಬೆಳೆದಿಲ್ಲ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಪಾಠಗಳನ್ನು ಕಲಿಸಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಎನ್.ಆರ್. ಪುರ ಇನ್ನರ್ ಕ್ಲಬ್ ಅಧ್ಯಕ್ಷೆ ಬಿಂದು ವಿಜಯ್ ಮಾತನಾಡಿ, ಮಕ್ಕಳ ಆಸಕ್ತಿಗೆ ತಕ್ಕಂತೆ ಶಿಕ್ಷಣ ಸಿಗುವಂತಾಗಬೇಕು. ಮಕ್ಕಳಿಗೆ ಒತ್ತಡದಿಂದ ಶಿಕ್ಷಣ ನೀಡಬಾರದು. ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿರುವುದು ಸಂತಸ ತಂದಿದೆ. ಕಳೆದ ಬಾರಿ ಈ ಶಾಲೆಗೆ ನಮ್ಮ ಕ್ಲಬ್ ನಿಂದ ಪ್ರಿಂಟರ್ ನೀಡಲಾಗಿತ್ತು. ಈ ಬಾರಿ ಗುಳದಮನೆ ಶಾಲೆಗೆ ನೀಡಲಾಗಿದೆ. ಬೆಳೆ ಸ್ಪರ್ಧೆಯಲ್ಲಿ ನನಗೂ ಕೂಡ ತಾಲೂಕು, ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಹಾಗೂ ನಗದು ಬಹುಮಾನ ದೊರೆತಿದೆ ಎಂದರು.ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ಮಕ್ಕಳು ಮನೆಯಲ್ಲೂ ಕೂಡ ಸೊಪ್ಪು, ತರಕಾರಿಗಳನ್ನು ಬೆಳೆಯುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಈ ಶಾಲೆಯಲ್ಲಿ ಭತ್ತ ಬೆಳೆದಿರುವುದು ಶಾಲಾ ಶಿಕ್ಷಕರ, ಪೋಷಕರ ಮತ್ತು ವಿದ್ಯಾರ್ಥಿಗಳ ಕಾಳಜಿ ತೋರಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯೆ ಶೈಲಾಮಹೇಶ್, ಪಿಡಿಒ ವಿಂದ್ಯಾ, ಎಸ್ ಡಿಎಂಸಿ ಉಪಾಧ್ಯಕ್ಷೆ ಉಷಾ ಮಾತನಾಡಿದರು. ನಂತರ ಸುಮಾರು 2 ಗುಂಟೆ ಪ್ರದೇಶದಲ್ಲಿ ಬೆಳೆದ ಭತ್ತದ ಪೈರನ್ನು ರೈತಗೀತೆಯನ್ನು ಹಾಡುವುದ ರೊಂದಿಗೆ ಕಟಾವು ಮಾಡಿದರು.ಕಾರ್ಯಕಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಉಪಾಧ್ಯಕ್ಷೆ ಉಷಾವಹಿಸಿದ್ದರು. ಈ ಸಂರ್ಭದಲ್ಲಿ ಇನ್ನರ್‌ವೀಲ್ ಕ್ಲಬ್ ಖಜಾಂಚಿ ನೀತಾ ಪ್ರದೀಪ್, ಮುಖ್ಯ ಶಿಕ್ಷಕ ರಾಜಪ್ಪ, ಎಸ್ ಡಿಎಂಸಿ ಸದಸ್ಯರಾದ ಸೌಮ್ಯ, ಪ್ರಭಾಕರ್, ಶಿಕ್ಷಕ ಎನ್.ಎಸ್. ಜೋಯಿ, ಗ್ರಾಮ ಆರೋಗ್ಯಾಧಿಕಾರಿ ರಾಹೀಲ್ ಶೇಖ್, ಅಂಗನವಾಡಿ ಶಿಕ್ಷಕಿ ನಯನ ಇದ್ದರು.