ಸಾರಾಂಶ
ಬಳ್ಳಾರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗಕ್ಕೆ ಮೀಸಲಿಟ್ಟಿದ್ದ ಹಣವನ್ನು ಜನಾಂಗದ ಪ್ರಗತಿಗೆ ಬಳಕೆ ಮಾಡದೆ ಎಲ್ಲ ರಾಜಕೀಯ ಪಕ್ಷಗಳು ಶೋಷಿತ ಸಮುದಾಯಗಳಿಗೆ ದ್ರೋಹ ಎಸಗಿವೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಜಿಲ್ಲಾಧ್ಯಕ್ಷ ಎಚ್.ಮುನಿಸ್ವಾಮಿ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಲು ನಾಂದಿ ಹಾಡಿದ ಕಾಂಗ್ರೆಸ್ ಸರ್ಕಾರದ ಹಾದಿಯನ್ನೇ ಬಿಜೆಪಿ-ಜೆಡಿಎಸ್ ಪಕ್ಷಗಳು ತುಳಿದವು. ಎಸ್‌ಸಿಎಸ್‌ಪಿ/ ಟಿಎಸ್ಪಿ ಕಾನೂನು ಜಾರಿಯಾದ ಬಳಿಕ ಈವರೆಗಿನ 10 ವರ್ಷಗಳಲ್ಲಿ 2 ಲಕ್ಷದ 56 ಸಾವಿರ ಕೋಟಿ ರು.ಗಳನ್ನು ಈ ಯೋಜನೆಗೆ ಮೀಸರಿಸಲಾಗಿದೆ. ಇಷ್ಟು ಹಣದಿಂದ ಕರ್ನಾಟಕದ ಎಸ್ಸಿ/ಎಸ್ಟಿ ಸಮುದಾಯದ ಸಮಗ್ರ ಪ್ರಗತಿಗೆ ಬಳಕೆ ಮಾಡಬಹುದಿತ್ತು. ಆದರೆ, ರಾಜ್ಯದಲ್ಲಿ ಈವರೆಗೆ ಅಧಿಕಾರದಲ್ಲಿರುವ ಸರ್ಕಾರಗಳಿಗೆ ಶೋಷಿತ ಸಮುದಾಯಗಳ ಬಗ್ಗೆ ಯಾವುದೇ ಕಾಳಜಿಯಿಲ್ಲ. ಹೀಗಾಗಿ ಈ ಹಣ ಸದ್ಭಳಕೆಯಾಗಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಮೀಸಲು ಹಣವನ್ನು ಅನ್ಯಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ತೀವ್ರ ಖಂಡನೀಯ. ಶೋಷಿತ ಸಮದಾಯಗಳ ಪರ ಎಂದು ಹೇಳುವ ಈ ಸರ್ಕಾರ ಮೀಸಲು ಹಣವನ್ನು ಬಳಕೆ ಮಾಡುತ್ತಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರು.ಪರಿಶಿಷ್ಟ ಸಮುದಾಯಗಳಿಗೆಂದೇ ಮೀಸಲಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಂತೆ ಕಂಡು ಬಂದಿದೆ. ಶ್ರೀವಾಲ್ಮೀಕಿ ನಿಗಮದ ಹಗರಣ ಹೊರ ಬಿದ್ದ ಬೆನ್ನಲ್ಲೇ, ಸಿಎಂ ಸಿದ್ಧರಾಮಯ್ಯ ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಿಜೆಪಿ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ ಸೇರಿದಂತೆ ಅನೇಕ ಇಲಾಖೆಗಳಲ್ಲಿ ನಡೆದಿರುವ ಹಗರಣಗಳನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 189 ಕೋಟಿ ರು.ಗಳ ಹಗರಣ ಬಯಲಾಗಿದೆ ಎಂದು ಆರೋಪಿಸಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಮುನಿಸ್ವಾಮಿ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಮೀಸಲು ಅನುದಾನದ ಹಣವನ್ನು ಅನ್ಯ ಉದ್ಧೇಶಗಳಿಗೆ ಬಳಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಜುಲೈ 26 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಮಹ್ಮದ್ ಅಲಿ, ಜಿಲ್ಲಾ ಸಂಯೋಜಕ ಉಮಾಪತಿ, ಉಪಾಧ್ಯಕ್ಷ ಬಾಬು, ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಬೆಳಗಲ್ ಕೃಷ್ಣಪ್, ಸಾಮ್ರಾಟ್, ರಮೇಶ್, ಚಿದಾನಂದಪ್ಪ ಸುದ್ದಿಗೋಷ್ಠಿಯಲ್ಲಿದ್ದರು.