ಚಿತ್ರದುರ್ಗದಲ್ಲಿ ಸಹಕಾರ ಕಾಯ್ದೆ ಕುರಿತಂತೆ ಆಯೋಜಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಸಹಕಾರ ರತ್ನ ಪುರಸ್ಕೃತ ಆರ್.ಮಲ್ಲೇಶಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಹಕಾರ ಕ್ಷೇತ್ರದಲ್ಲಿ ಕಾಲಕಾಲಕ್ಕೆ ಜಾರಿಗೆ ಬರುವ ಕಾಯ್ದೆ-ಕಾನೂನುಗಳ ತಿದ್ದುಪಡಿ ಹಾಗೂ ಬದಲಾವಣೆಗಳ ಬಗ್ಗೆ ಪದಾಧಿಕಾರಿಗಳು ಜಾಗೃತರಾದಾಗ ಮಾತ್ರ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ ಎಂದು ಸಹಕಾರರತ್ನ ಪುರಸ್ಕೃತ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್. ಮಲ್ಲೇಶಪ್ಪ ಅಭಿಪ್ರಾಯಪಟ್ಟರು.ನಗರದ ದುರ್ಗದ ಸಿರಿ ಹೋಟೆಲ್‍ನಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ವಿಭಾಗದಲ್ಲಿ ಬರುವ ಆಯ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದಾಧಿಕಾರಿಗಳು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತರಬೇತಿಯಲ್ಲಿ ನೀಡಲಾಗುವ ಕಾನೂನು ಮಾಹಿತಿಯು ಕೇವಲ ಕೇಳಿಸಿಕೊಳ್ಳುವುದಕ್ಕೆ ಸೀಮಿತವಾಗಬಾರದು. ಬದಲಾಗಿ ಪ್ರತಿಯೊಬ್ಬ ನಿರ್ದೇಶಕರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಇಲ್ಲಿ ಪಡೆದ ಜ್ಞಾನವನ್ನು ತಮ್ಮ ಸಂಘಗಳ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ತರಬೇತಿಯ ಸದುಪಯೋಗ ಪಡೆದುಕೊಂಡು ಸಂಘದ ಪಾರದರ್ಶಕತೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜೆ.ಶಿವಪ್ರಕಾಶ್ ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಶಿಕ್ಷಣ, ತರಬೇತಿ ಮತ್ತು ಪ್ರಚಾರ ನೀಡುವ ಉದ್ದೇಶ ಹೊಂದಿದೆ. ತಮ್ಮ ಸಹಕಾರ ಸಂಘಗಳಿಂದ ಲಾಭದಲ್ಲಿ ನೀಡುವ ಶೇ.02 ಸಹಕಾರ ಶಿಕ್ಷಣ ನಿಧಿಯನ್ನು ಉಪಯೋಗಿಸಿಕೊಂಡು ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್‍ಗಳು ಇಂತಹ ತರಬೇತಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿ ಉತ್ತಮವಾದ ತರಬೇತಿಯನ್ನು ನೀಡಲಾಗುತ್ತಿದೆ. ಸಹಕಾರ ಸಂಘಗಳಿಂದ ಬಂದಿರುವ ಪ್ರತಿನಿಧಿಗಳು ಇಂತಹ ತರಬೇತಿ ಸದುಪಯೋಗ ಪಡಿಸಿಕೊಂಡು, ಜ್ಞಾನ ಪಡೆದುಕೊಂಡಲ್ಲಿ ತಮ್ಮ ಸಂಘಗಳ ಪಾಲನೆ, ಅಭಿವೃದ್ಧಿಪಡಿಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಈ ಅಜ್ಜಪ್ಪ ಮಾತನಾಡಿ, ಸಹಕಾರ ಕಾಯ್ದೆ, ಕಾನೂನುಗಳಲ್ಲಿ ಇತ್ತೀಚೆಗೆ ಆಗುವ ಬದಲಾವಣೆಗಳು, ತಿದ್ದುಪಡಿಗಳ ಮಾಹಿತಿಯನ್ನು ನುರಿತ ಉಪನ್ಯಾಸಕರಿಂದ ಪಡೆದು ತಮ್ಮ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್‍ಕುಮಾರ್ ಮಾತನಾಡಿ, ಜ್ಞಾನ ಎಂಬುದು ಯಾರ ಸ್ವತ್ತು ಅಲ್ಲ, ನಿಂತ ನೀರು ಅಲ್ಲ, ಇದಕ್ಕೆ ಕೊನೆ ಎಂಬುದಿಲ್ಲ. ಇದನ್ನು ಅರಿತುಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಜ್ಞಾನ ಪಡೆದುಕೊಳ್ಳಬೇಕಾಗಿದೆ ಎಂದರು.
ಸಹಕಾರ ಸಂಘಗಳಲ್ಲಿ ಇತ್ತೀಚೆಗೆ ತಿದ್ದುಪಡಿಯಾದ ಕಾಯ್ದೆ ಕಾನೂನಿನ ಮುಖ್ಯಾಂಶಗಳ ಕುರಿತು ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ ಉಪನ್ಯಾಸ ನೀಡಿದರು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಜಿ.ವಿ.ಗಂಗಾಧರಪ್ಪ, ಎ.ಚನ್ನಬಸಪ್ಪ, ಮಂಜಮ್ಮ, ಕಾರ್ಯಕ್ರಮದ ಸಮನ್ವಯಾಧಿಕಾರಿ ಎಸ್.ವಿ.ಹಿರೇಮಠ್, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಶ್ರೀ ಪಿ.ಹುನಗುಂದ, ಶಿಕ್ಷಕ ನಾಗರಾಜ್ ಪಾಟೀಲ್, ಯೂನಿಯನ್ ಸಿಬ್ಬಂದಿ ಟಿ.ಎನ್.ಶ್ರೀನಿವಾಸ್ ಇದ್ದರು.