ಕನ್ನಡಪ್ರಭ ವಾರ್ತೆ ಮದ್ದೂರು

ಮಳೆ, ಬಿಸಿಲು, ಚಳಿ ಎನ್ನದೇ ಬೇಸಾಯ ಮಾಡಿ ವಿಶ್ವದ ಜನರ ಹಸಿವು ನೀಗಿಸುತ್ತಿರುವ ರೈತ ಸಂಕುಲ ಪ್ರಸ್ತುತ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಬೇಸರ ವ್ಯಕ್ತಪಡಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ 46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮಳವಳ್ಳಿ ರಸ್ತೆಯ ವಿಶ್ವ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಪುತ್ಥಳಿಗೆ ಮಂಗಳವಾರ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

1980ರಲ್ಲಿ ನಡೆದ ನವಲಗುಂದ ಮತ್ತು ನರಗುಂದ ರೈತ ಹೋರಾಟದಲ್ಲಿ ಮಡಿದ ಮೂವರು ಹಾಗೂ 1982ರಲ್ಲಿ ನಡೆದ ಗೆಜ್ಜೆಲಗೆರೆ ರೈತ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ರೈತ ಹುತಾತ್ಮ ಯೋಧರ ಜತೆಗೆ ನಾಡಿನ 164 ಹುತಾತ್ಮ ರೈತರನ್ನು ಸ್ಮರಿಸುವುದು ನಮ್ಮೆಲ್ಲರ ಪುಣ್ಯದ ಕೆಲಸ ಎಂದರು.

ಪ್ರಸ್ತುತ ನಾಡಿನ ಜಲಾಶಯಗಳು ಮಳೆ ಅಭಾವದಿಂದ ಭರ್ತಿಯಾಗದೆ ಕುಡಿಯುವ ನೀರು ಹಾಗೂ ಬೇಸಾಯಕ್ಕೆ ತೊಂದರೆಯಾಗಿದೆ. ಈಗಾಗಲೇ ಭತ್ತದ ಒಟ್ಟಲು ಹಾಕಿ ನಾಟಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಆದರೆ, ನೀರಿನ ಕೊರತೆಯಿಂದ ಯಾವುದೇ ಕೃಷಿ ಚಟುವಟಿಕೆಗಳು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.


ರೈತರು ಬೆಳೆದಿರುವ ಕಬ್ಬು, ಬಾಳೆ, ತೆಂಗು ಹಾಗೂ ಅಡಿಕೆ ನೀರಿಲ್ಲದೆ ಒಣಗುತ್ತಿವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಬರ ಘೋಷಣೆ ಮಾಡುವ ಮೂಲಕ ರೈತರ ಬೆಳೆ ಸಾಲ ಮನ್ನಾ ಮಾಡಿ ಪರಿಹಾರ ವಿತರಿಸಬೇಕು. ಅನ್ನದಾತರ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್ ಮಾತನಾಡಿ, ಕೆಆರ್ ಎಸ್ ನಿಂದ ವಿಶ್ವೇಶ್ವರಯ್ಯ ನಾಲೆಗಳಿಗೆ ಹರಿಯುತ್ತಿರುವ ನೀರು ಕೊನೆ ಭಾಗಕ್ಕೆ ತಲುಪಿಸಲು ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಈ ವೇಳೆ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಯುವ ಘಟಕದ ಅಧ್ಯಕ್ಷ ವಿ.ಪಿ.ವಿಶ್ವಾಸ್, ಉಪಾಧ್ಯಕ್ಷರಾದ ಪಟೇಲ್ ಹರೀಶ್, ಎಂ,ವೀರಪ್ಪ ಆಲೂರು ಚೆನ್ನಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಹಳ್ಳಿ ಕರಿಗೌಡ, ಕಾರ್ಯದರ್ಶಿ ರಮೇಶ, ಮುಖಂಡರಾದ ವಿ.ಪಿ.ವರದರಾಜು, ವಿ.ಎಂ.ಶಿವರಾಜು, ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲು, ಮಾಜಿ ಯೋಧ ಶ್ರೀನಿವಾಸ್ ಇದ್ದರು.