ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ

| Published : Nov 24 2025, 01:15 AM IST

ಸಾರಾಂಶ

ಚಿತ್ರದುರ್ಗದ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣದಲ್ಲಿ ಅಜಯ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸುಮಾರು 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಳಿವು ಉಳಿವು ಕನ್ನಡ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಕಾವಲು ಸಮಿತಿ, ಹೀಗೆ ಅನೇಕ ಸಂಘಟನೆಗಳ ಮೂಲಕ ರಕ್ಷಣೆಗೆ ಒಳಪಡುತ್ತಲೇ ಇದೆ. ಆದರೂ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಮತ್ತು ಭವಿಷ್ಯದ ಮಕ್ಕಳ ಮೇಲಡಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಮ್.ಗುರುನಾಥ್ ಹೇಳಿದರು.

ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಲ್ಮಿಡಿ ಶಾಸನದಾದಿಯಾಗಿ ಹಿಡಿದು ಕುವೆಂಪು ಕಾರಂತ, ಕಲುಬುರ್ಗಿ, ಕಂಬಾರಾದಿಯಾಗಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಈ ನುಡಿ ಎಂದೂ ಅಜರಾಮರ. ಈ ಭಾಷೆಯ ಆಳಗಲಗಳು ಇಂದಿಗೂ ಎಲ್ಲರಿಗೂ ದೊರಕದಂತಹ ವಿಶೇಷ ಸ್ಥಾನಮಾನದಲ್ಲಿ ನಿಂತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ತಾಲೂಕು ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿದ ತಾಲೂಕು ಅಧ್ಯಕ್ಷ ವಿಎಲ್ ಪ್ರಶಾಂತ್ ಮಾತನಾಡಿ ಪ್ರತಿಯೊಬ್ಬರು ಕನ್ನಡ ಸಂಸ್ಕೃತಿ ಉಳಿಸುವ ಜವಾಬ್ದಾರಿಯನ್ನು ಹೊರಬೇಕಿದೆ .ಅಂತೆಯೇ ಪರಭಾಷೆಗಳನ್ನು ಗೌರವಿಸುವ ಮಧ್ಯೆ ಕನ್ನಡವನ್ನು ರಾರಾಜಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನಿದು ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಅಜಯ್ ಮಾತನಾಡಿ, ಮುಂದಿನ ಪೀಳಿಗೆಗೆ ಕನ್ನಡವನ್ನು ಉಳಿಸುವ ಜವಾಬ್ದಾರಿ ಶಾಲೆಗಳ ಮೇಲಿದೆ. ಶಾಲೆಗಳಷ್ಟೇ ಅಲ್ಲದೆ ನಿತ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಹೊಸ ಕನ್ನಡ ಪದಗಳ ಬಳಕೆ ಕನ್ನಡವನ್ನು ಉತ್ಕೃಷ್ಟಗೊಳಿಸುವ ಸಾಧ್ಯತೆಗಳಲ್ಲಿ ಒಂದಾಗಿದೆ.ಶಾಲಾ ಶಿಕ್ಷಣ ಇಲಾಖೆ ಕೆಪಿಎಸ್ , ಕನ್ನಡ ಶಾಲೆಗಳನ್ನು ಹತ್ತಿರದ ಕೇಂದ್ರೀಯ ಶಾಲೆಗೆ ಮರು ಹೊಂದಾಣಿಕೆ ಮಾಡುತ್ತಾ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಶೊಚನೀಯ. ಇದನ್ನು ಸಾಹಿತ್ಯ ಪರಿಷತ್ತು ಖಂಡಿಸುತ್ತದೆ . ಪ್ರಾದೇಶಿಕ ಭಾಷೆ ಯಾವಾಗಲೂ ಅನ್ನದ ಭಾಷೆ ಆಗಿರುತ್ತದೆ. ಅದರ ಹಿಂದೆ ಬಿದ್ದಲ್ಲಿ ಮಾತ್ರ ಬದುಕು ಹಸನಾಗುತ್ತದೆ. ಆಂಗ್ಲ ಭಾಷೆ ಕಲಿತರೆ ಮಾತ್ರ ಅನ್ನ ಸಿಗುತ್ತದೆ ಎಂಬ ಕಲ್ಪನೆಯಿಂದ ನಾವು ಹೊರ ಬರಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಎಂ ಶಿವಸ್ವಾಮಿ ಮಾತನಾಡಿ, ಎಲ್ಲಾ ಹಿರಿಯ ಕಿರಿಯರನ್ನು ಒಟ್ಟುಗೂಡಿಸಿಕೊಂಡು ಜಿಲ್ಲಾ ಕೇಂದ್ರದಲ್ಲಿ ಕನ್ನಡದ ಕಾರ್ಯ ಚಟುವಟಿಕೆಗಳನ್ನ ದೂರ ದೃಷ್ಟಿಯಿಂದ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಲಿ ಎಂದರು.

ಕನ್ನಡ ಗಾಯನ ಕರೋಕೆ ಕಾರ್ಯಕ್ರಮಕ್ಕೆ ಸುಮಾರು ಮೂವತ್ತಕ್ಕೂ ಹೆಚ್ಚು ಗಾಯಕರು ಪಾಲ್ಗೊಂಡು ಕನ್ನಡದ ಗಾನಸುದೆಯನ ಎಲ್ಲೆಡೆ ಪಸರಿಸಿದರು. ಸೌಮ್ಯ ಮತ್ತು ಹರೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಲೋಕೇಶ್, ಗೌರವ ಕಾರ್ಯದರ್ಶಿ ಶ್ರೀನಿವಾಸ್ ಮಳಲಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ವಕೀಲರಾದ ಪ್ರತಾಪ್ ಜೋಗಿ, ಹರೀಶ್ ಪ್ರಕಾಶ್, ಮನು ಇದ್ದರು.