ಅರಣ್ಯ ಸಂರಕ್ಷಣೆ ಬಗ್ಗೆ ಎಚ್ಚರ ಅನಿವಾರ್ಯ: ಟಿ.ಜಿ.ಪ್ರೇಮಕುಮಾರ್

| Published : Mar 24 2024, 01:35 AM IST

ಅರಣ್ಯ ಸಂರಕ್ಷಣೆ ಬಗ್ಗೆ ಎಚ್ಚರ ಅನಿವಾರ್ಯ: ಟಿ.ಜಿ.ಪ್ರೇಮಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಸಂರಕ್ಷಣೆ ಬಗ್ಗೆ ತ್ವರಿತವಾಗಿ ಎಚ್ಚೆತ್ತುಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಅರಣ್ಯ ಸಂರಕ್ಷಣೆ ಬಗ್ಗೆ ತ್ವರಿತಗತಿಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಪರಿಸರ ವ್ಯವಸ್ಥೆಯಲ್ಲಿ ಎದುರಾಗುವ ಗಂಡಾಂತರ ಸಮಸ್ಯೆಗೆ ಪ್ರತಿಯೊಬ್ಬರು ಬೆಲೆ ತೆರಬೇಕಾಗುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ, ವಿಜ್ಞಾನ ಸಂಘ, ಸೀಕೋ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ ಹಾಗೂ ಎಸ್ ಡಿ ಎಂ ಸಿ ಯ ಸಹಯೋಗದೊಂದಿಗೆ ‘ಅರಣ್ಯಗಳು ಮತ್ತು ನಾವೀನ್ಯತೆ’ ಎಂಬ ಧ್ಯೇಯದೊಂದಿಗೆ ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ ಅರಣ್ಯ ದಿನದ ಮಹತ್ವ ಮತ್ತು ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಪ್ರಸಕ್ತ ವರ್ಷ ‘ಅರಣ್ಯಗಳು ಮತ್ತು ನಾವೀನ್ಯತೆ‘’ಎಂಬ ವಿಷಯದ ಮೇಲೆ 2024 ರ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಮಾನವೀಯತೆ ಮತ್ತು ಗ್ರಹದ ಉಳಿವಿಗಾಗಿ ಕಾಡುಗಳು ಮತ್ತು ಮರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಅರಣ್ಯ ದಿನ ಆಚರಿಸಲಾಗುತ್ತಿದೆ ಎಂದರು.

ನಾವು ನಾಳಿನ ಉತ್ತಮ ಭವಿಷ್ಯತ್ತಿಗಾಗಿ ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ- ವೈವಿಧ್ಯ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಿಸಲು ಪಣ ತೊಡಬೇಕಿದೆ ಎಂದರು.

ಮಾನವ ಜನಾಂಗದ ಉಳಿವು ಮತ್ತು ಜೀವನಾಧಾರಕ್ಕಾಗಿ ಕಾಡುಗಳು ಬಹಳ ಮುಖ್ಯವಾಗಿವೆ.

ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪದಿಂದ ಇಂದು ಜೀವ ವೈವಿಧ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ಈ ದಿಸೆಯಲ್ಲಿ ನಾವು ಉತ್ತಮ ಭವಿಷ್ಯತ್ತಿಗಾಗಿ ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ- ವೈವಿಧ್ಯ ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರೇಮಕುಮಾರ್ ಹೇಳಿದರು.

ಅರಣ್ಯ ದಿನದ ಮಹತ್ವ ಕುರಿತು ಮಾತನಾಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ , ನಮ್ಮ ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದರು.

ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳು ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು.