ಯುನಿಟಿ ರನ್ ಆ್ಯಂಡ್ ರೈಡ್ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕಾರವಾರ

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ 101ನೇ ಜನ್ಮದಿನೋತ್ಸವದ ಅಂಗವಾಗಿ ಸತ್ಯ ಸಾಯಿ ಸೇವಾ ಸಮಿತಿ ಜಿಲ್ಲಾ ಘಟಕವು ‘ಫಿಟ್ ಇಂಡಿಯಾ’ ಸಂಘಟನೆಯ ಸಹಯೋಗದೊಂದಿಗೆ ಭಾನುವಾರ ಮುಂಜಾನೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಯುನಿಟಿ ರನ್ ಆ್ಯಂಡ್ ರೈಡ್’ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಮಾಲಾದೇವಿ ಮೈದಾನದಿಂದ ಆರಂಭಗೊಂಡ ಈ ಏಕತೆಯ ಓಟದಲ್ಲಿ ನಗರದ ಸಾವಿರಾರು ನಾಗರಿಕರು ಸಕ್ರಿಯವಾಗಿ ಪಾಲ್ಗೊಂಡು ಗಮನ ಸೆಳೆದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಎಂ. ಪದ್ಮನಾಭ ಪೈ, "ಸತ್ಯ ಸಾಯಿ ಬಾಬಾರವರ ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ " ಎಂಬ ಉದಾತ್ತ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸುವ ಪ್ರಯತ್ನ ಸಾಗುತ್ತಿದೆ. ದೇಶದ ಸುಮಾರು 60 ಪ್ರಮುಖ ನಗರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಸೋಲು-ಗೆಲುವಿಗಿಂತಲೂ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, "ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಪ್ರತಿಯೊಬ್ಬರಿಗೂ ದೈಹಿಕ ಫಿಟ್‌ನೆಸ್ ಅತ್ಯಗತ್ಯ. ಸಮಾಜಕ್ಕೆ ಆರೋಗ್ಯದ ಅರಿವು ಮೂಡಿಸುವಲ್ಲಿ ಸಾಯಿ ಸಂಸ್ಥೆಯ ಈ ಪ್ರಯತ್ನ ಶ್ಲಾಘನೀಯ ಎಂದರು.

ಮ್ಯಾರಥಾನ್‌ನಲ್ಲಿ 3 ಕಿಮೀ, 5 ಕಿಮೀ ಹಾಗೂ 10 ಕಿಮೀ ಓಟದ ವಿಭಾಗಗಳಿದ್ದವು. ಇನ್ನು ಸೈಕ್ಲಿಂಗ್ ವಿಭಾಗದಲ್ಲಿ ಮಹಿಳೆಯರು 16 ಕಿಮೀ ಹಾಗೂ ಪುರುಷರು 22 ಕಿಮೀ ಗುರಿಯನ್ನು ಉತ್ಸಾಹದಿಂದ ತಲುಪಿದರು.

ಈ ಕಾರ್ಯಕ್ರಮದಲ್ಲಿ ಯಾವುದೇ ಸ್ಪರ್ಧೆ ಅಥವಾ ಬಹುಮಾನ ಕೊಡುವಿಕೆ ಇರಲಿಲ್ಲ. ಬದಲಾಗಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಉಚಿತ ಟಿ-ಶರ್ಟ್ ವಿತರಿಸಲಾಯಿತು ಹಾಗೂ ಪೂರ್ಣಗೊಳಿಸಿದವರಿಗೆ ಪದಕ ಮತ್ತು ಡಿಜಿಟಲ್ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬೆಳ್ಳಂಬೆಳಗ್ಗೆ ಓಟದಲ್ಲಿ ಪಾಲ್ಗೊಂಡು ನಗರದಲ್ಲಿ ಕ್ರೀಡಾ ಕಳೆ ತಂದರು.

ಈ ಸಂದರ್ಭ ಸಾಯಿ ಸಂಸ್ಥೆಯ ಗೋವಾ ರಾಜ್ಯಾಧ್ಯಕ್ಷ ಮಹೇಶ ಪಾವಸ್ಕರ, ಜಿಲ್ಲಾಧ್ಯಕ್ಷ ರಾಮದಾಸ್ ಆಚಾರಿ, ರಾಜ್ಯ ಸೇವಾ ಸಂಯೋಜಕ ಪ್ರಿಯಾ ಪೈ, ಜಿಲ್ಲಾ ಸಂಯೋಜಕ ಜಿ.ಡಿ. ಮನೋಜ್ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳಾದ ವೆಂಕಟೇಶ ಬಡಿಗೇರ, ಸುರೇಶ್ ಶೆಟ್ಟಿ, ನಂದಕುಮಾರ ಭಟ್, ತಿಮ್ಮಯ್ಯ ಮಿರಾಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.