ಮಲ್ಲಿಕಾರ್ಜುನ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ಸಿದ್ದಾಪುರಸಂಚಾರ, ಸಾರಿಗೆ ಸಂಪರ್ಕ, ಮೂಲಸೌಕರ್ಯಗಳು ಅಭಿವೃದ್ಧಿ ಹೊಂದಿಲ್ಲದ ಶತಮಾನದ ಹಿಂದೆ ಕೃಷಿಕರಿಗೆ ಆರ್ಥಿಕ ಶಕ್ತಿ ಕೊಡುವ ಪ್ರಯತ್ನವಾಗಿ ಸಹಕಾರಿ ಸಂಘಗಳನ್ನು ಆರಂಭಿಸಿದ ಹಿರಿಯರು ಸ್ಮರಣೀಯರು. ಅಂದಿನ ಸಸಿ ಇಂದು ಹೆಮ್ಮರವಾಗಿ ಬೆಳೆದು ಹಲವು ರೂಪಗಳಲ್ಲಿ ಕೃಷಿಕರಿಗೆ ನೆರವನ್ನು ನೀಡುತ್ತಿದ್ದು ಅಂಥ ಸಹಕಾರಿ ಸಂಘಗಳಲ್ಲಿ ಬಾಳೇಸರ ಸಂಘವೂ ಒಂದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ತಾಲೂಕಿನ ಬಾಳೇಸರದ ಶ್ರೀ ಮಲ್ಲಿಕಾರ್ಜುನ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಭಾಗದ ಜನತೆಗೆ ಈ ಸಂಘ ಆಸರೆಯಾಗಿದೆ. ಅರ್ಥಪೂರ್ಣವಾದ ಸೇವೆಯನ್ನೂ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಗಳು ಹಾದಿ ತಪ್ಪುತ್ತಿದ್ದು ಅದನ್ನು ಸರಿ ರೀತಿಯಲ್ಲಿ ನಡೆಸುವುದು ಆಡಳಿತ ಮಂಡಳಿ ಜವಾಬ್ದಾರಿ. ಸಂಘದ ಆರ್ಥಿಕ ಸದೃಢತೆ ಕಾಪಾಡುವುದು ಮುಖ್ಯ. ಬಾಳೇಸರ ಸಂಘ ತನ್ನ ಕರ್ತವ್ಯ, ಜವಾಬ್ದಾರಿ ಅರಿತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಸಂಘದ ಸದಸ್ಯರಿಗೆ ಶತಮಾನೋತ್ಸವದ ನೆನಪಿಗೆ ನೀಡಲಾಗುವ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ, ಸಹಕಾರಿ ಸಂಘಗಳ ಬಹುದೊಡ್ಡ ಮೌಲ್ಯ ಪಾವಿತ್ರ್ಯತೆ. ಅದನ್ನು ಉಳಿಸಿಕೊಂಡು ಬಂದ ಕಾರಣಕ್ಕೆ ಸಹಕಾರಿ ಸಂಘಗಳು ನೂರು ವರ್ಷಗಳನ್ನು ಕಂಡಿವೆ. 139 ವರ್ಷಗಳ ಹಿಂದೆ ಆರಂಭಗೊಂಡ ಸಹಕಾರಿ ಚಳವಳಿ ನಮ್ಮ ಜಿಲ್ಲೆಯನ್ನು ಅತ್ಯಂತ ಬಲಿಷ್ಠವಾಗಿ ಬೆಳೆಯುವುದರ ಜೊತೆಗೆ ಹಲವಾರು ಸಹಕಾರಿ ದಿಗ್ಗಜರನ್ನು ನೀಡಿದೆ. ಸಹಕಾರಿ ಕ್ಷೇತ್ರಕ್ಕೆ ಸಿದ್ದಾಪುರ ತಾಲೂಕಿನ ಕೊಡುಗೆಯೂ ಅಪಾರವಾದದ್ದು. ಸಂಘದ ಆರೋಗ್ಯವನ್ನು ಆ ಸಂಘದ ಅಡಾವೆ ಪತ್ರಿಕೆ ಸೂಚಿಸುತ್ತದೆ. ಹಮ್ಮಿಕೊಂಡ ಎಲ್ಲ ಸೇವಾ ಯೋಜನೆಗಳಲ್ಲೂ ಈ ಸಂಘ ಯಶಸ್ವಿಯಾಗಿರುವುದು ಇಲ್ಲಿನ ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರ ಸಹಕಾರ, ವಿಶ್ವಾಸಾರ್ಹತೆ ಕಾರಣ ಎಂದರು. ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಶಿರಸಿ ಡೆವಲಪಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಜಿ.ಕೆ. ರಾಮಪ್ಪ, ಪತ್ರಕರ್ತ ಪ್ರವೀಣ ಹೆಗಡೆ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರವಿಹೆಗಡೆ ಹುಳಗೋಳ, ಮನುವಿಕಾಸ ಸಂಸ್ಥೆಯ ಗಣಪತಿ ಭಟ್ಟ, ಸಂಘದ ಉಪಾಧ್ಯಕ್ಷ ಶ್ರೀಧರ ಹೆಗಡೆ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ ತಂಗಾರ್ಮನೆ ಸ್ವಾಗತಿಸಿದರು.ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರು, ಸ್ಥಳದಾನಿಗಳು ಹಾಗೂ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ಗಣಪತಿ ಜಿ. ಹೆಗಡೆಯವರನ್ನು ಸನ್ಮಾನಿಸಲಾಯಿತು.