ಸಾರಾಂಶ
ಕನ್ನಡತ್ವ ಮತ್ತು ಬಸವಣ್ಣ ನೆಲದ ಅಸ್ಮಿತೆಗೆ ಮೆರುಗು ನೀಡಿದ ಎರಡು ಸಂಗತಿಗಳು ಎಂದು ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನ್ನಡತ್ವ ಮತ್ತು ಬಸವಣ್ಣ ನೆಲದ ಅಸ್ಮಿತೆಗೆ ಮೆರುಗು ನೀಡಿದ ಎರಡು ಸಂಗತಿಗಳು ಎಂದು ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಹೇಳಿದರು. ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾಷೆಯಾಗಿ ಪ್ರಾಚೀನತೆಯಿಂದ ಆಧುನಿಕತೆಯವರೆಗೆ ಕನ್ನಡವೂ, ಧರ್ಮದಾಚೆಗೆ ವಚನಗಳು ತನ್ನತನವನ್ನು ಹುಡುಕಿಕೊಳ್ಳುವ ಪ್ರಮೇಯದಿಂದ ಬಸವಣ್ಣನೂ ನಮಗೆ ಮುಖ್ಯವಾಗಬೇಕು. ಆಗ ನಾವು ನಮ್ಮನ್ನು ಹುಡುಕುತ್ತ ವಾಸ್ತವ ಜ್ಞಾನದೆಡೆಗೆ ಸಾಗುತ್ತೇವೆ ಎಂದು ತಿಳಿಸಿದರು.
ಬಸವಣ್ಣನ ವಚನಗಳು ಸರಳವಾಗಿವೆ. ವಚನಗಳನ್ನು ಅಧ್ಯಯನ ನಡೆಸಿ ಅರ್ಥ ಮಾಡಿಕೊಳ್ಳಬೇಕು. ವಚನದಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ ಎಂದರು.ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಅತೀವ ಅನುಭವವುಳ್ಳ ಡಾ. ಅರವಿಂದ ಜತ್ತಿ ಅವರು ಕನ್ನಡ ನಾಡಿನ ಉತ್ಸವವನ್ನು ಹಬ್ಬವಾಗಿಸುವ ಚಾತಿಯುಳ್ಳವರು. ಅವರಲ್ಲಿರುವ ಅಗಾಧ ಜ್ಞಾನ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.ದೇಶೀಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಆಳವನ್ನು ಕುತೂಹಲದ ಕಣ್ಣಿನಿಂದ ಗ್ರಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ರುದ್ರಪ್ಪ ಕೊಳಲೆ ಮಾತನಾಡಿ, ಜತ್ತಿ ಅವರ ಭಾಷೆಯ ಪ್ರೇಮ ದೊಡ್ಡದು. ಅವರು ವಚನಗಳನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಿಸುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರು.ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟೇಶ, ಪ್ರೊ. ಕುಮಾರಸ್ವಾಮಿ, ಪ್ರೊ. ಸಾವಿತ್ರಿ ಉಪಸ್ಥಿತರಿದ್ದರು.