ಎರಡೂವರೆ ವರ್ಷದ ಮಗಳ ಮೇಲೆ ಸ್ವತಃ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಪ್ರಕರಣದಲ್ಲಿ ತಾಯಿಯ ಅನುಪಸ್ಥಿತಿಯಲ್ಲಿ ಸಂತ್ರಸ್ತ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಂಡ ಅಧೀನ ನ್ಯಾಯಾಲಯದ ಕ್ರಮವನ್ನು ‘ಮೂರ್ಖತನ’ ಎಂದು ಹೈಕೋರ್ಟ್ ಕಟು ಶಬ್ದದಿಂದ ಖಂಡಿಸಿದೆ.
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರುಎರಡೂವರೆ ವರ್ಷದ ಮಗಳ ಮೇಲೆ ಸ್ವತಃ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಪ್ರಕರಣದಲ್ಲಿ ತಾಯಿಯ ಅನುಪಸ್ಥಿತಿಯಲ್ಲಿ ಸಂತ್ರಸ್ತ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಂಡ ಅಧೀನ ನ್ಯಾಯಾಲಯದ ಕ್ರಮವನ್ನು ‘ಮೂರ್ಖತನ’ ಎಂದು ಕಟು ಶಬ್ದದಿಂದ ಖಂಡಿಸಿರುವ ಹೈಕೋರ್ಟ್, ಹೊಸದಾಗಿ ತಾಯಿಯ ಮುಂದೆಯೇ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಳ್ಳಲು ತಾಕೀತು ಮಾಡಿದೆ.
ಸಂತ್ರಸ್ತ ಬಾಲಕಿಯ ತಾಯಿ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ 26(1) ಅನ್ವಯ ಸಂತ್ರಸ್ತ ಮಗುವಿನ ಸ್ವ-ಇಚ್ಛಾ ಹೇಳಿಕೆಯನ್ನು ಆಕೆಯ ಪೋಷಕರು ಅಥವಾ ಆಕೆ ವಿಶ್ವಾಸ ಹೊಂದಿರುವ ಯಾವುದೇ ಇತರೆ ವ್ಯಕ್ತಿಯ ಉಪಸ್ಥಿತಿಯಲ್ಲಿ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಅಧಿಕಾರಿ ದಾಖಲಿಸಿಕೊಳ್ಳುವುದು ಕಡ್ಡಾಯ. ಸೆಕ್ಷನ್ 35(5)ಪ್ರಕಾರ ಸಂತ್ರಸ್ತ ಮಗುವನ್ನು ಪದೇ ಪದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ವಿಚಾರಣೆಗೆ ಒಳಪಡಿಸುವುದು ಕಾನೂನು ಬಾಹಿರ. ಮಗುವನ್ನು ಒಂದೇ ಬಾರಿಗೆ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಆದರೆ, ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂತ್ರಸ್ತ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲಾತಿ ಪ್ರತಿ ಪರಿಶೀಲಿಸಿದರೆ, ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲೆ ವೇಳೆ ತಾಯಿ ಅನುಪಸ್ಥಿತರಿದ್ದರೇ ಅಥವಾ ಉಪಸ್ಥಿತರಿದ್ದರೆ ಎಂಬುದೇ ಅಸ್ಪಷ್ಟವಾಗಿದೆ. ಭವಿಷ್ಯದಲ್ಲಿ ಪ್ರಕರಣ ವಿಚಾರಣೆ ಕಾನೂನುಬಾಹಿರವಾಗಿ ಅಂತ್ಯ ಕಾಣುವುದನ್ನು ತಪ್ಪಿಸಲು, ಈ ವಿವಾದ ಬಗೆಹರಿಸಲು, ಸ್ವ-ಇಚ್ಛಾ ಹೇಳಿಕೆ ದಾಖಲಿಸಲು ಪುನಃ ಮಗುವನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯವು (ಮಾ.28ರಂದು) ಮಗುವಿನ ಬಾಲಕಿಯ ಸ್ವ-ಇಚ್ಛಾ ಹೇಳಿಕೆಯನ್ನು ತಾಯಿ ಮುಂದೆ ದಾಖಲಿಸಿಕೊಳ್ಳಬೇಕು. ಒಂದೊಮ್ಮೆ ನ್ಯಾಯಾಲಯ ದೂರುದಾರರಿಗೆ ಮತ್ತು ಸಂತ್ರಸ್ತ ಮಗುವಿಗೆ ಹಾನಿಕರವಾದ ಯಾವುದೇ ಆದೇಶ ಹೊರಡಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಕಟು ಎಚ್ಚರಿಕೆ ನೀಡಿದೆ.ಪ್ರಕರಣದ ವಿವರ:
ಸಂತ್ರಸ್ತ ಮಗುವಿನ ತಾಯಿಯು ಪೊಲೀಸರಿಗೆ ಸಲ್ಲಿಸಿದ್ದ ದೂರಿನಲ್ಲಿ ತನ್ನ ಮಗುವಿಗೆ ಗಾಯಗಳಾಗಿದ್ದವು. ಆ ಬಗ್ಗೆ ವಿಚಾರಿಸಿದಾಗ ‘ಡೈಪರ್ ಬದಲಾಯಿಸುವಾಗ ತನ್ನ ಮೇಲೆ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಮಗು ತಿಳಿಸಿರುವುದಾಗಿ ಎಂದು ಆರೋಪಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಪೋಕ್ಸೋ ವಿಶೇಷ (ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್, ಎಫ್‌ಟಿಎಸ್‌ಸಿ-3) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಈ ಮಧ್ಯೆ ಹೈಕೋರ್ಟ್ ಮೆಟ್ಟಿಲೇರಿದ್ದ ಮಗುವಿನ ತಾಯಿ, 2025ರ ನ.5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಚೇಂಬರಲ್ಲಿ ಸಂತ್ರಸ್ತೆಯ ಸ್ವ-ಇಚ್ಛಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ನ್ಯಾಯಾಧೀಶರು, ಬೆಳಚ್ಚುಗಾರ್ತಿ ಮತ್ತು ಸಂತ್ರಸ್ತ ಬಾಲಕಿ ಮಾತ್ರ ಇದ್ದರು ಎಂದು ತಿಳಿಸಿದ್ದರು.‘ಬಾಲಕಿ ಹೇಳಿಕೆ ನೀಡುತ್ತೇನೆ ಎಂದು ಹೇಳಿದ್ದರಿಂದ ಆಕೆಯ ಸ್ವ-ಇಚ್ಛಾ ಹೇಳಿಕೆ ಪಡೆದಿರುತ್ತೇನೆ. ನನಗೆ ಏನೂ ಆಗಿಲ್ಲ ಎಂದ ಬಾಲಕಿ ತಾಯಿ ಬೇಕು ಅಂತ ಹೇಳಿ ವಾಪಸ್ ಹೋಗಿದೆ. ಆದ ಕಾರಣ, ತಾಯಿಯ ಸಕ್ಷಮ ಮತ್ತೊಮ್ಮೆ ಹೇಳಿಕೆ ಪಡೆದುಕೊಳ್ಳಲಾಯಿತು. ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಬಾಲಕಿಯ ತಾಯಿಯೇ ಏನಾಯಿತು ಎಂದು ಕೇಳಲಾಗಿ ಬಾಲಕಿ ಯಾವುದೇ ಉತ್ತರ ನೀಡಿಲ್ಲ ’ ಎಂದು ನ್ಯಾಯಾಧೀಶರು ಸ್ವ-ಇಚ್ಛಾ ಹೇಳಿಕೆ ದಾಖಲಾತಿ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ಪೋಕ್ಸೋ ಕಾಯ್ದೆ ಸೆಕ್ಷನ್ 26(1)ಕ್ಕೆ ವಿರುದ್ಧವಾಗಿ ಬಾಲಕಿಯ ಸ್ವ-ಇಚ್ಛಾ ಹೇಳಿಕೆ ದಾಖಲೆ ಪ್ರಕ್ರಿಯೆ ನಡೆಸಿದ್ದಾರೆ ಎಂದು ಆಕ್ಷೇಪಿಸಿದ್ದರು.
ಅರ್ಜಿದಾರೆಯ ಪರ ವಕೀಲ ಆರ್.ಎಸ್. ಅಭಯ್ ಮತ್ತು ಆನಂದಿತಾ ರೆಡ್ಡಿ, ಪೋಕ್ಸೋ ಸೆಕ್ಷನ್ 26(1) ವಿರುದ್ಧವಾಗಿ ಮಗುವಿನ ಸ್ವ-ಇಚ್ಛಾ ಹೇಳಿಕೆ ದಾಖಲಾತಿ ಪ್ರಕ್ರಿಯೆ ನಡೆಸಲಾಗಿದೆ. ಈ ಅಂಶ ಪರಿಗಣಿಸಿಯೇ ಆರೋಪಿ ತಂದೆಗೆ ಜಾಮೀನು ದೊರೆತಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದಿದ್ದರು.-ಕೋಟ್-
ಹೈಕೋರ್ಟ್ ಆದೇಶದ ಅನುಸಾರ ಶನಿವಾರ (ಮಾ.28ರಂದು) ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಸಂತ್ರಸ್ತ ಬಾಲಕಿಯ ಸ್ವ-ಇಚ್ಛಾ ಹೇಳಿಕೆಯನ್ನು ಆಕೆಯ ತಾಯಿಯ ಉಪಸ್ಥಿತಿಯಲ್ಲಿ ದಾಖಲಿಸಿಕೊಂಡಿದೆ.- ವಕೀಲ ಆರ್.ಎಸ್.ಅಭಯ್