ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ರೇವರಿಸ್‌ ಮತ್ತು ಅಂತಹುದೇ ಮದ್ಯಮಾರಾಟ ಸಂಸ್ಥೆಗಳು ತನ್ನಲ್ಲಿಗೆ ಬರುವವರ ವಯಸ್ಸನ್ನು ಕಡ್ಡಾಯವಾಗಿ ಆಧಾರ್ ಅಥವಾ ಇತರ ಅಧಿಕೃತ ಗುರುತು ಪತ್ರಗಳ ಮೂಲಕ ಪರಿಶೀಲಿಸಬೇಕು ಎಂದು ಮಹತ್ವದ ಆದೇಶವನ್ನು ಹೈಕೋರ್ಟ್‌ ನೀಡಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಬ್ರೇವರೀಸ್ ಅಥವಾ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳಲ್ಲಿ ವಯಸ್ಸಿನ ಪರಿಶೀಲನೆ ಕಾಟಾಚಾರ ಅಥವಾ ಉದಾಸೀನದಿಂದ ನಡೆಯಬಾರದು. ಅಪ್ರಾಪ್ತರು ಮದ್ಯಪಾನ ಮಾಡಬಾರದು. ಅಪ್ತಾಪ್ತರಿಗೆ ಮದ್ಯ ಸರಬರಾಜು ಮಾಡುವುದಿಲ್ಲ ಎಂಬ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಕಠಿಣ ಆದೇಶ ಹೊರಡಿಸಿದೆ.

ಶಾಲಾ ವಿದ್ಯಾರ್ಥಿಗೆ (ಅಪ್ರಾಪ್ತನಿಗೆ) ಮದ್ಯಪಾನ-ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ನಗರದ ಲೆಗಸಿ ಬ್ರೇವಿಂಗ್‌ ಕಂಪನಿ ಪಾಲುದಾರ ವಿ.ಚಿಟ್ಟಿಬಾಬು ವಿರುದ್ಧ ದಾಖಲಾದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ಈ ಆದೇಶ ಹೊರಡಿಸಿದೆ.

ಲೆಗಸಿ ಕಂಪನಿಯಲ್ಲಿ ಜ.31ರಂದು 15 ವರ್ಷದ ಶಾಲಾ ವಿದ್ಯಾರ್ಥಿ ರೆಯಾನ್‌ ಜೇಕಬ್‌ ಮದ್ಯ ಸೇವಿಸಿದ ನಂತರ ತನ್ನ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಅಪ್ತಾಪ ಬಾಲಕನಿಗೆ ಮದ್ಯಪಾನಕ್ಕೆ ಅವಕಾಶ ಕೊಟ್ಟ ಆರೋಪದ ಮೇಲೆ ತಮ್ಮ ವಿರುದ್ಧ ರಾಜರಾಜೇಶ್ವರಿನಗರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಚಿಟ್ಟಿಬಾಬು ತಕರಾರು ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಬ್ರೇವರೀಸ್ ಮತ್ತು ಅಂತಹುದೇ ಸಂಸ್ಥೆಗಳು, ಗ್ರಾಹಕರ ಪ್ರವೇಶ ವೇಳೆ ವಯಸ್ಸು ಪರಿಶೀಲನಾ ಪ್ರೋಟೋಕಾಲ್‌ ಅನ್ನು ಕಟ್ಟುನಿಟ್ಟಾಗಿ ಆರಂಭಿಸಬೇಕು. ಯುವಕರು ಅಥವಾ ಅಪ್ರಾಪ್ತ ವಯಸ್ಕರ ವಯಸ್ಸಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ.

ಉದಾಸೀನ ಬೇಡ:

ಅಪ್ರಾಪ್ತ ವಯಸ್ಕರು ಪ್ರವೇಶ ಪಡೆದು, ಮದ್ಯ/ಮಾದಕ ವಸ್ತುಗಳ ನೀಡಲು ಕೋರಿದಾಗ, ಬಹಿರಂಗವಾಗಿ ಅಥವಾ ರಹಸ್ಯವಾಗಿ ಸೇವನೆ ಮಾಡಿದಾಗ ಬ್ರೇವರೀಸ್‌ ಸಂಸ್ಥೆಗಳ ಆಡಳಿತ ಮಂಡಳಿ ಉದಾಸೀನತೆ ತೋರಬಾರದು. ಯುವಕರ ರಕ್ಷಣೆ ಕೇವಲ ಶಾಸನಬದ್ಧ ಕರ್ತವ್ಯವಲ್ಲ. ಅದು ನೈತಿಕವಾಗಿ ಕಡ್ಡಾಯ. ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಿದರೂ ಅಂಥ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.

ಪ್ರಕರಣದಲ್ಲಿ 15 ವರ್ಷದ ಬಾಲಕ ತಮ್ಮ ಸ್ನೇಹಿತರೊಂದಿಗೆ ಬ್ಯಾಗಿನಲ್ಲಿ ಮದ್ಯ ತಂದು ಖಾಲಿಯಿದ್ದ ಮೇಜಿನ ಕೆಳಗೆ ಕುಳಿತು ಮದ್ಯ ಸೇವಿಸಿ ನಂತರ ಲೆಗಸ್ಸಿ ಬ್ರೇವಿಂಗ್‌ ಕಂಪನಿ ಆವರಣದಿಂದ ಹೊರ ನಡೆದಿದ್ದಾನೆ. ಇದರಿಂದ ಬಾಲಕ ಏನು ಸೇವಿಸಿದ ಎಂಬುದು ಅರ್ಜಿದಾರ ಅಥವಾ ಕಂಪನಿಯ ಸಿಬ್ಬಂದಿಗೆ ತಿಳಿದಿಲ್ಲ.18ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಂಪನಿ ಮದ್ಯ ಸರಬರಾಜು ಮಾಡುವುದಿಲ್ಲ. ಅಬಕಾರಿ ಕಾಯ್ದೆಯು ಮದ್ಯ ಸರಬರಾಜಿಗೆ ಶಿಕ್ಷೆ ನೀಡುತ್ತದೆಯೇ ಹೊರತು ಸೇವನೆಗೆ ಅಲ್ಲ. ಆದ್ದರಿಂದ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕು ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.

ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸರಬರಾಜು ಮಾಡುವಂತಿಲ್ಲ. ಬ್ರೇವರಿ ಮಾರಾಟ ಮತ್ತು ತಯಾರಿಕೆ ಆವರಣಕ್ಕೆ ಅಪ್ರಾಪ್ತ ವಯಸ್ಸಿನ ಹುಡುಗರಿಗೆ ಪ್ರವೇಶಾತಿಗೆ ಅನುಮತಿಸಿರುವುದು ಕಳವಳ ಉಂಟು ಮಾಡುವಂತಾಗಿದೆ ಎಂದು ಅಭಿಪ್ರಾಯಪಟ್ಟಿತು.

ಈ ಪ್ರಕರಣದಲ್ಲಿ ಮದ್ಯ ಸೇವೆನೆಯಿಂದ ದುರದುಷ್ಟವಶಾತ್‌ ಬಾಲಕನ ಸಾವು ಸಂಭವಿಸಿದೆ. ಮೃತದೇಹದಲ್ಲಿ ಮದ್ಯವು (ಆಲ್ಕೋಹಾಲ್‌) ಪತ್ತೆಯಾಗಿರುವುದನ್ನು ತಳ್ಳಿಹಾಕಲಾಗದು. ಅರ್ಜಿದಾರರ ಸಂಸ್ಥೆ ಸಿಬ್ಬಂದಿ ಅಥವಾ ಆಡಳಿತ ಮಂಡಳಿಯ ಅರಿವಿಲ್ಲದೆ ಮೃತ ಬಾಲಕ ಮದ್ಯ ಸೇವಿಸಿದ್ದಾನೆ ಎಂಬ ವಾದವೇ ವಿಚಾರಣೆಗೆ ಒಳಪಡುವಂತಹದ್ದು. ಹಾಗಾಗಿ, ಪ್ರಕರಣದ ತನಿಖೆ ನಡೆಯುವ ಅಗತ್ಯವಿದೆ. ಜೊತೆಗೆ, ವಯಸ್ಸಿನ ಪರಿಶೀಲನೆ ಇಲ್ಲದೆ ಅಪ್ರಾಪ್ತ ವಯಸ್ಕರು ಹೇಗೆ ಲೆಗಸಿ ಬ್ರೇವರಿ ಲಿಮಿಟೆಡ್‌ಗೆ ಪ್ರವೇಶಿಸಿದರು? ದಾಖಲೆಗಳ ಗುರುತು ಪರಿಶೀಲಿಸಲು ಯಾವುದೇ ಕಾರ್ಯವಿಧಾನ ಅಸ್ತಿತ್ವದಲ್ಲಿದೆಯೇ? ಈ ವಿಚಾರದಲ್ಲಿ ಮೇಲ್ವಿಚಾರಣಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆಯೇ? ಮತ್ತು ಮದ್ಯ ಪರವಾನಗಿದಾರರು ತಮ್ಮ ಮೇಲೆ ವಿಧಿಸಲಾಗಿರುವ ಶಾಸನಬದ್ಧ ಹೊಣೆಗಾರಿಕೆಗಳನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವುದು ಅಗತ್ಯ ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.