ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆಯುವುದು ಕಡ್ಡಾಯ
KannadaprabhaNewsNetwork | Published : Nov 04 2023, 12:30 AM IST
ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆಯುವುದು ಕಡ್ಡಾಯ
ಸಾರಾಂಶ
ರಾಮನಗರ: ಪಟಾಕಿ ಮಾರಾಟಗಾರರೇ ಇನ್ನು ಮುಂದೆ ಎಲ್ಲೆಂದರಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ. ನಿರ್ದಿಷ್ಟ ಪ್ರದೇಶಗಳಲ್ಲಿ ಹಸಿರು ಪಟಾಕಿಗಳನ್ನಷ್ಟೇ ವ್ಯಾಪಾರ ಮಾಡಬೇಕು.
ರಾಮನಗರ: ಪಟಾಕಿ ಮಾರಾಟಗಾರರೇ ಇನ್ನು ಮುಂದೆ ಎಲ್ಲೆಂದರಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ. ನಿರ್ದಿಷ್ಟ ಪ್ರದೇಶಗಳಲ್ಲಿ ಹಸಿರು ಪಟಾಕಿಗಳನ್ನಷ್ಟೇ ವ್ಯಾಪಾರ ಮಾಡಬೇಕು. ಮಳಿಗೆಗಳ ಸ್ಥಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಿಷೇಧಿತ ಪಟಾಕಿ ದಾಸ್ತಾನು ಮಾಡಿದ್ದಲ್ಲಿ ಪಟಾಕಿ ಗೋದಾಮು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೌರಾಡಳಿತ ನಿರ್ದೇಶನಾಲಯ ಪಟಾಕಿಗಳ ದಾಸ್ತಾನು ಹಾಗೂ ಮಾರಾಟ ಸ್ಥಳಗಳ ಬಗ್ಗೆ ಷರತ್ತುಗಳನ್ನು ಹಾಕಿ ಆದೇಶ ಹೊರಡಿಸಿದೆ. 5 ಸಮಿತಿಗಳ ರಚನೆ : ಇದರ ಆಧಾರದ ಮೇಲೆ ರಾಮನಗರ ಜಿಲ್ಲಾಡಳಿತ ಪಟಾಕಿ ಮಾರಾಟದ ಮಳಿಗೆಗಳ ನಿರ್ಮಾಣಕ್ಕೆ ಪ್ರತಿ ತಾಲೂಕು ಮಟ್ಟದಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಪರವಾನಗಿ ನೀಡಲು 5 ಸಮಿತಿಗಳನ್ನು ರಚಿಸಿದೆ. ಆ ಸಮಿತಿಗಳಲ್ಲಿ ಆಯಾಯ ತಾಲೂಕಿನ ತಹಸೀಲ್ದಾರ್, ಆರಕ್ಷಕ ನಿರೀಕ್ಷಕರು, ತಾಪಂ ಇಒ, ಪೌರಾಯುಕ್ತರು, ಅಗ್ನಿ ಶಾಮಕ ಠಾಣಾಧಿಕಾರಿ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಧಿಕಾರಿಗಳು ಇದ್ದಾರೆ. ಜಂಟಿಯಾಗಿ ಪರಿಶೀಲಿಸಿದ ನಂತರವೇ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ಸಿಗಲಿದೆ. ಪಟಾಕಿ ಮಾರಾಟ ಸ್ಥಳ ಅಂತಿಮವಾದ ಬಳಿಕ ಆ ಸ್ಥಳಗಳಲ್ಲಷ್ಟೇ ಪಟಾಕಿಗಳನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಆ ಸ್ಥಳ ಬಿಟ್ಟು ಬೇರೆ ಸ್ಥಳಗಲ್ಲಿ, ರಸ್ತೆ ಬದಿ, ದಿನಸಿ ಅಂಗಡಿಗಳನ್ನು ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಆದ್ದರಿಂದಲೇ ಪಟಾಕಿ ಅಂಗಡಿಗಳನ್ನು ತೆರೆಯಲು ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ನಿಬಂಧನೆಯನ್ನು ಜಿಲ್ಲಾಡಳಿತ ವಿಧಿಸಿದೆ. ದೀಪಾವಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಪೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೂ ತೀವ್ರ ಪರಿಣಾಮ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಮಾರ್ಗಸೂಚಿಗಳನ್ನು ಹೊರಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆಯೂ ಜಿಲ್ಲಾಡಳಿತ ಅದೇಶಿಸಿದೆ. ಬಾಕ್ಸ್ ................. ಷರತ್ತುಗಳು ಏನೇನು ? -ರಾತ್ರಿ 8ರಿಂದ 10ಗಂಟೆವರೆಗೆ ಮಾತ್ರ ಪಟಾಕಿಗಳನ್ನು ಸ್ಫೋಟಿಸಲು ಅವಕಾಶ - ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. -ಪಟಾಕಿ ಅಂಗಡಿ ತೆರೆಯಲು ಸಮಿತಿಯಿಂದ ಅನುಮತಿ ಪಡೆಯುವವರು ಎಲ್ಲ ಷರತ್ತುಗಳನ್ನು ಪೂರೈಸಬೇಕು. -ಕಾರ್ಯಪಡೆಗಳು ಎಲ್ಲ ಪಟಾಕಿ ಗೋದಾಮುಗಳನ್ನು ಪರಿಶೀಲಿಸಬೇಕು. ಹಸಿರು ಪಟಾಕಿಯಲ್ಲದೆ, ನಿಷೇಧಿತ ಪಟಾಕಿಗಳು ದಾಸ್ತಾನು ಮಾಡಿದ್ದಲ್ಲಿ ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸಂಬಂಧಿತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. -ನಿಗಧಿತ ವಿಧಿ ವಿಧಾನಗಳ ಮೂಲಕ ಹಸಿರು ಪಟಾಕಿಗಳ ಶಬ್ದ ಮಟ್ಟವನ್ನು ಮಾಪನ ಮಾಡಬೇಕು. ನಿಗದಿತ ಗುಣಮಾಪನಗಳಿಗೆ ಸರಿ ಹೊಂದದಿದ್ದರೆ ಅವುಗಳನ್ನು ಮಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. -ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪಟಾಕಿ ಸ್ಪೋಟಿಸುವಂತಿಲ್ಲ. -ದೀಪಾವಳಿ ಸಮಯದಲ್ಲಿ ಉತ್ಪಾದನೆಯಾಗುವಂತಹ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು. -ಹೊರ ರಾಜ್ಯಗಳಿಂದ ಅನಧಿಕೃತವಾಗಿ ನಿಷೇಧಿತ ಪಟಾಕಿಗಳನ್ನು ಸಾಗಾಣೆ ಮಾಡುತ್ತಿದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕೋಟ್ ............... ಪಟಾಕಿ ಮಾರಾಟ ಸಂಬಂಧ ತಾತ್ಕಾಲಿಕ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಇದನ್ನು ನೀಡಲು ಜಂಟಿಯಾಗಿ ಪರಿಶೀಲಿಸಿ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್ ನೇತೃತ್ವದಲ್ಲಿ ವರದಿ ಸಲ್ಲಿಸಲು ಸಮಿತಿ ರಚನೆ ಮಾಡಲಾಗಿದೆ. ಈಗ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಮಿತಿಗಳಿಗೆ ರವಾನಿಸಲಾಗಿದೆ. - ಅವಿನಾಶ್ , ಜಿಲ್ಲಾಧಿಕಾರಿಗಳು, ರಾಮನಗರ 3ಕೆಆರ್ ಎಂಎನ್ 2,3.ಜೆಪಿಜಿ ಪಟಾಕಿಗಳ ಚಿತ್ರ