ಚಿಕ್ಕಮಗಳೂರುಕೇಂದ್ರ ಸರ್ಕಾರ ಜ.15 ರಿಂದ ಮಾ. 15ರವರೆಗೆ ಹಮ್ಮಿಕೊಂಡಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ (ಪಿಎಂಎಸ್‌ವೈಎಂ) ವಿಶೇಷ ನೋಂದಣಿ ಅಭಿಯಾನದಲ್ಲಿ ಜಿಲ್ಲೆಯ ಎಲ್ಲ ಅಸಂಘಟಿತ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಈ ಯೋಜನೆ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸಲಹೆ ನೀಡಿದ್ದಾರೆ.
(ಜಿಲ್ಲಾಧಿಕಾರಿ ಫೋಟೋ ಬಳಸಿ)ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೇಂದ್ರ ಸರ್ಕಾರ ಜ.15 ರಿಂದ ಮಾ. 15ರವರೆಗೆ ಹಮ್ಮಿಕೊಂಡಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ (ಪಿಎಂಎಸ್‌ವೈಎಂ) ವಿಶೇಷ ನೋಂದಣಿ ಅಭಿಯಾನದಲ್ಲಿ ಜಿಲ್ಲೆಯ ಎಲ್ಲ ಅಸಂಘಟಿತ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಈ ಯೋಜನೆ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸಲಹೆ ನೀಡಿದ್ದಾರೆ.ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಗೆ ಒಳಪಡುವ ವಿವಿಧ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿರುವ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಒದಗಿಸುತ್ತಿರುವ ಪಿಂಚಣಿ ಯೋಜನೆ ಇದಾಗಿದ್ದು ಗೃಹ ಆಧಾರಿತ ಕಾರ್ಮಿಕರು, ಸಾರಿಗೆ ಚಾಲಕರು, ಕೈಮಗ್ಗ. ಚರ್ಮೋದ್ಯಮ ಇಟ್ಟಿಗೆ ಬಟ್ಟಿ, ನರೇಗಾ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಹಾಗೂ ವಿವಿಧ ಉದ್ಯೋಗ ಮಾಡುತ್ತಿರುವವರು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
18ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರಾಗಿರಬೇಕು ಹಾಗೂ ಇಎಸ್‌ಐ, ಪಿಎಫ್, ಎನ್‌ಪಿಎಸ್ ಹೊಂದಿರಬಾರದು. ಹಾಗೆಯೇ ಆದಾಯ ತೆರಿಗೆ ಪಾವತಿದಾರರೂ ಆಗಿರಬಾರದು. ಈ ಯೋಜನೆಯಲ್ಲಿ ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರವಾಗಿ ಕೇಂದ್ರ ಸರ್ಕಾರ ಪಿಂಚಣಿ ಖಾತೆಗೆ ಹಣ ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಅಂತಹ ಕಾರ್ಮಿಕರು ಮಾಸಿಕ ₹3 ಸಾವಿರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ವಂತಿಕೆ ಕನಿಷ್ಠ ₹55 ರಿಂದ ಗರಿಷ್ಠ 200 ರು.ಗಳಾಗಿರುತ್ತದೆ. ವಯಸ್ಸಿಗನುವಾಗಿ ವಂತಿಕೆ ನಿಗದಿಪಡಿಸಲಾಗಿದೆ ಎಂದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 4790 ಜನ ಕಾರ್ಮಿಕರನ್ನು ನೋಂದಾಯಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕವಾದ ಜಾಗೃತಿ ಹಾಗೂ ಪ್ರಚಾರ ವನ್ನು ಕೈಗೊಂಡು ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ಲಾಭ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಸಿ.ಸುರೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಅಸಂಘಟಿತ ವಲಯದ ಕಾರ್ಮಿಕ ಮುಖಂಡರು ವ್ಯಾಪಾರ, ಉದ್ಯೋಗ ಸಂಘದವರು ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.