ಸಾರಾಂಶ
ಚಿತ್ರದುರ್ಗ: ಸಮುದಾಯದಲ್ಲಿ ಏನಾದರೂ ಪರಿವರ್ತನೆಯಾಗಬೇಕಾದರೆ ಮೊದಲು ಹೆಣ್ಣು ಶಿಕ್ಷಣವಂತಳಾಗಬೇಕು. ಜೀವನದಲ್ಲಿ ಎದುರಾಗುವ ಕಠಿಣ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕಾದರೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಡಾನ್‍ಬೋಸ್ಕೋ ಸಂಸ್ಥೆ ನಿರ್ದೇಶಕ ರೆವೆರೆಂಡ್ ಫಾದರ್ ಸಜ್ಜಿಜಾರ್ಜ್ ತಿಳಿಸಿದರು. ಜಿಲ್ಲಾಡಳಿತ, ಚಿತ್ರ ಡಾನ್‍ಬೋಸ್ಕೋ ಸಂಯುಕ್ತಾಶ್ರಯದಲ್ಲಿ ತುರುವನೂರು ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಎರಡನೇ ದರ್ಜೆಯನ್ನಾಗಿ ನೋಡಲಾಗುತ್ತಿದೆ. ಸಾಕಷ್ಟು ತಾರತಮ್ಯ ಅಸಮಾನತೆ ಇನ್ನು ಜೀವಂತವಾಗಿರುವುದರಿಂದ ನಾನಾ ರೀತಿಯ ಶೋಷಣೆಗೆ ಹೆಣ್ಣು ಒಳಗಾಗುತ್ತಿದ್ದಾಳೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದಾರೆ. ಪರಿಪಾಲನೆಯಾಗಬೇಕಷ್ಟೆ. ಹಲವಾರು ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಎಲ್ಲರನ್ನು ಪ್ರೀತಿಸುವ ಒಳಗೊಳ್ಳುವ ಧರ್ಮವೆ ನಿಜವಾದ ಮಾನವೀಯತೆ. ವಿದ್ಯೆಯಿಂದ ಅಧಿಕಾರ ಪಡೆಯಬಹುದು. ಸರ್ಕಾರದಲ್ಲಿ ಎಲ್ಲಾ ಸೌಲಭ್ಯಗಳಿವೆ. ಬಳಸಿಕೊಂಡು ನಿಮ್ಮ ಹಕ್ಕುಗಳನ್ನು ಪಡೆಯಬೇಕು. ಲಭ್ಯವಾಗುವ ಶೈಕ್ಷಣಿಕ ಅವಕಾಶಗಳ ಸಮರ್ಥವಾಗಿ ಬಳಸಿಕೊಳ್ಳುವವಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್.ಎನ್ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣದ ಕಡೆ ಗಮನ ಕೊಟ್ಟು ಚೆನ್ನಾಗಿ ಓದಿ ಸ್ವಾವಲಂಭಿಗಳಾಗಿ ಆತ್ಮವಿಶ್ವಾಸ ಮೂಡಿಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿವೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು. ನಿಮ್ಮ ರಕ್ಷಣೆಗೆ ಹಲವಾರು ಕಾನೂನುಗಳಿವೆ. ಭಯಪಡುವುದು ಬೇಡ. ಕಾನೂನು ಇದ್ದರೆ ಸಾಲದು. ಪರಿಪಾಲನೆಯಾಗಬೇಕು ಎಂದು ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೇಖಾ ಮಾತನಾಡಿ, ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಪೋಷಕರು, ಶಿಕ್ಷಕರುಗಳ ಬಳಿ ನಿಮ್ಮ ತೊಂದರೆಗಳನ್ನು ಹೇಳಿಕೊಂಡರೆ ಪರಿಹಾರ ಸಿಗುತ್ತದೆ. ಪೊಲೀಸ್, ಕಾನೂನು ಇದೆ. ಕೌನ್ಸಿಲಿಂಗ್ ಮೂಲಕ ಎಲ್ಲದಕ್ಕೂ ಪರಿಹಾರವಿದೆ ಎಂದ ಅವರು, ಹೆಣ್ಣಿಗೆ ಹದಿನೆಂಟು ವರ್ಷ, ಗಂಡಿಗೆ 21 ವರ್ಷವಾಗಿದ್ದರೆ ಮಾತ್ರ ಮದುವೆಗೆ ಅರ್ಹರು. ಇಲ್ಲವಾದಲ್ಲಿ ಬಾಲ್ಯ ವಿವಾಹವಾಗುತ್ತದೆ. ನಿಮ್ಮ ಮನೆಗಳಲ್ಲಿ, ಅಕ್ಕಪಕ್ಕದಲ್ಲಿ ಯಾರಾದರೂ ಬಾಲ್ಯ ವಿವಾಹ ಮಾಡಿದರೆ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಿ ಎಂದು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಹಾಸ್ಟೆಲ್ ವಾರ್ಡ್‍ನ್‍ಗಳಾದ ಹನುಮಂತಪ್ಪ ಪೂಜಾರ್, ದೇವರಾಜ್, ಚಿತ್ರಡಾನ್ ಬೋಸ್ಕೋ ಸಂಸ್ಥೆಯ ಮಂಜುನಾಥ್ ಇದ್ದರು.