ಬಾಲಕಿಯರ ರಕ್ಷಣೆ, ಅವರ ಹಕ್ಕುಗಳು, ವೈಯಕ್ತಿಕ ಸುರಕ್ಷತೆ ಹಾಗೂ ಕಾನೂನು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸವಣೂರಿನ ಸಿವಿಲ್ ಕೋರ್ಟ್ ನ್ಯಾಯಾಧೀಶ ಶ್ರೀನಿವಾಸ ಎಸ್.ಎನ್. ಹೇಳಿದರು.

ಸವಣೂರು: ಬಾಲಕಿಯರ ರಕ್ಷಣೆ, ಅವರ ಹಕ್ಕುಗಳು, ವೈಯಕ್ತಿಕ ಸುರಕ್ಷತೆ ಹಾಗೂ ಕಾನೂನು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸವಣೂರಿನ ಸಿವಿಲ್ ಕೋರ್ಟ್ ನ್ಯಾಯಾಧೀಶ ಶ್ರೀನಿವಾಸ ಎಸ್.ಎನ್. ಹೇಳಿದರು.ತಾಲೂಕಿನ ಅಲ್ಲಿಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಬಾಲಕಿಯರ ರಕ್ಷಣಾ ಸಮಿತಿ ವತಿಯಿಂದ ವಿದ್ಯಾರ್ಥಿನಿಯರು ಹಾಗೂ ತಾಯಂದಿರಿಗಾಗಿ ಮಂಗಳವಾರ ಆಯೋಜಿಸಲಾಗಿದ್ದ ಏಕದಿನ ಜಾಗೃತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಮತ್ತು ತಾಯಂದಿರು ದಿನನಿತ್ಯದಲ್ಲಿ ಎದುರಿಸುವ ಸಮಸ್ಯೆಗಳು, ಅಪಾಯದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರವಾಗಿ ತಿಳಿಸಿದರು.ಬಾಲಕಿಯರ ರಕ್ಷಣೆಗೆ ಕಾನೂನು ನೀಡಿರುವ ಭದ್ರತೆ ಹಾಗೂ ಕಾನೂನು ಉಲ್ಲಂಘನೆಯಾದರೆ ಎದುರಾಗುವ ಗಂಭೀರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ, ಕಾನೂನು ಅರಿವು ಬಾಲಕಿಯರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು.ಅತಿಥಿ ಉಪನ್ಯಾಸಕರು, ನ್ಯಾಯವಾದಿ ಎಸ್.ಎಸ್. ಕೇರಿಯವರ ಪೋಕ್ಸೋ ಕಾಯ್ದೆ ಕುರಿತು ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವಲ್ಲಿ ಕಾಯ್ದೆಯ ಮಹತ್ವ, ಶಿಕ್ಷೆಗಳ ಸ್ವರೂಪ ಹಾಗೂ ದೂರು ನೀಡುವ ವಿಧಾನಗಳನ್ನು ವಿವರಿಸಿದರು.ಸವಣೂರಿನ ಸರ್ಕಾರಿ ಅಭಿಯೋಜಕ ಶ್ರೀ ಹಾದಿಮನಿ ಹಾಗೂ ಸವಣೂರು ವಕೀಲರ ಸಂಘದ ಅಧ್ಯಕ್ಷ ವಿ.ಬಿ.ತುರಕಾಣಿ ಬಾಲಕಿಯರ ಸುರಕ್ಷತಾ ಕ್ರಮಗಳು, ಅಪಾಯದ ಸಂದರ್ಭಗಳಲ್ಲಿ ಅನುಸರಿಸಬೇಕಾದ ರಕ್ಷಣಾತ್ಮಕ ಮಾರ್ಗಗಳು ಹಾಗೂ ತಕ್ಷಣ ನೆರವು ಪಡೆಯುವ ವಿಧಾನಗಳ ಕುರಿತು ಸಲಹೆಗಳನ್ನು ನೀಡಿದರು.ಕಾರ್ಯಾಗಾರದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಬೇವಿನಹಳ್ಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಎಸ್.ಆರ್. ಹಿರೇಮಠ ಹಾಗೂ ಮಂಜುನಾಥ ರಾಯಪುರ, ಶಾಲೆಯ ಮುಖ್ಯ ಶಿಕ್ಷಕಿ ಐ. ಎಸ್. ಹಿರೇಮಠ, ಎಂ.ಡಿ. ಕಡ್ಡಿಪೂಜಾರ, ಎಂ.ಎಸ್. ಕೊಟಗಿ, ಶಿಕ್ಷಕರು, ತಾಯಂದಿರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಅಮೀರಬೀ ಮಕಾನದಾರ ಸ್ವಾಗತಿಸಿದರು. ಶಾಲಿನಿ, ಅರಿಫಾ, ಅನುಶ್ರೀ ಹಾಗೂ ಅಮೃತಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ಅಂಕಿತಾ ಬಸವರಾಜ್ ಮತ್ತೂರು ಕಾರ್ಯಕ್ರಮ ನಿರೂಪಿಸಿದರು. ಫಾತಿಮಾ ಮಕಾನದಾರ ವಂದನಾರ್ಪಣೆ ಸಲ್ಲಿಸಿದರು.