ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸಮಾಜದಲ್ಲಿ ಕ್ರಿಮಿನಲ್ ಹಿನ್ನೆಲೆವುಳ್ಳವರು, ವಿಜಿಟಿಂಗ್ ಕಾರ್ಡ ಪತ್ರಕರ್ತರಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ನಗರದ ತ್ರಿಪುರಾಂತ ಯಾತ್ರಿ ನಿವಾಸದಲ್ಲಿ ಭಾನುವಾರ ಸಂಜೆ ಅಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಶಂಕರಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೀನ ದಲಿತರ ಕಣ್ಣೀರು ಒರೆಸುವವರು, ಸತ್ಯಶೋಧಕರು ಮತ್ತು ಜನಮುಖಿಯಾದ ಸುದ್ದಿ ಬರೆಯುವವರು ನಿಜ ಪತ್ರಕರ್ತರಾಗಿರುತ್ತಾರೆ. ಪತ್ರಕರ್ತರಿಗೆ ಬದ್ಧತೆ, ಪ್ರಾಮಾಣಿಕತೆ ಇರಬೇಕು. ಮಾಧ್ಯಮದಲ್ಲಿ ಕೆಲಸ ಮಾಡುವರ ಜವಾಬ್ದಾರಿ ಮಹತ್ವದ್ದಾಗಿದೆ. ವೃತ್ತಿಗೆ ಬದ್ಧತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರರ್ತರ ಸಂಖ್ಯೆಯಲ್ಲಿ ಹೆಚ್ಚಾಗಬೇಕಿದೆ. ಸಮಾಜ ನಮ್ಮನ್ನು ಗಮನಿಸುತ್ತಿದೆ ಎನ್ನುವ ಎಚ್ಚರಿಕೆಯಿಂದ ಸದಾ ಕಾರ್ಯನಿರ್ವಹಿಸಸಬೇಕಿದೆ. ವೃತ್ತಿಗೆ ಕಳಂಕ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಿದೆ. ಕಾರ್ಯನಿರತರಿಗೆ ಮಾತ್ರ ನಮ್ಮ ಸಂಘಟನೆ ಇದೆಯೇ ಹೊರತು ಮರೆತವರಿಗಲ್ಲ ಎಂದರು.
ನಾನು ಪತ್ರಕರ್ತ ಎಂದು ಹೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸಲಿ ಪತ್ರಕರ್ತರಿಗಿಂತ ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಶರಣು ಸಲಗರ ಮಾತನಾಡಿ, ಪತ್ರಿಕೋದ್ಯಮದ ಮೆರಗು ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಅಗಬೇಕು. ಸಮಾಜದ ಓರೆಕೋರೆಗಳನ್ನು, ಅಂಕುಡೊಂಕುಗಳನ್ನು ತಿದ್ದುವ ಕೆಲಸ ಆಗಬೇಕು. ಪತ್ರಿಕಾ ಭವನ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ಬಸವಕಲ್ಯಾಣದಲ್ಲಿ ಪತ್ರಿಕಾ ಭವನ ನಿಮಾಣಕ್ಕೆ ವ್ಯವಸ್ಥೆ ಆದಷ್ಟು ಬೇಗ ಮಾಡಲು ಪ್ರಯತ್ನಿಸುತ್ತೇನೆ. ಪತ್ರಕರ್ತರ ಕ್ಷೇಮಾಭಿವೃದ್ದೀ ನಿಧಿ ಅರಂಭಿಸಿದರೆ 2 ಲಕ್ಷ ರು. ವಯಕ್ತಿಕವಾಗಿ ನೀಡುತ್ತೇನೆ ಎಂದು ಶಾಸಕರು ತಿಳಿಸಿದರು.ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ವರ್ಷದಲ್ಲಿ ನಾವು ಮಾಡಿದ ಕೆಲಸದ ಬಗ್ಗೆ ಅತ್ಮಾವಲೋಕನ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳು ವುದೇ ಪತ್ರಿಕಾ ಧರ್ಮ. ಇದು ಪತ್ರಿಕಾ ದಿನಾಚರಣೆಯ ಉದ್ದೇಶವೂ ಆಗಿದೆ. ನಿಷ್ಪಕ್ಷಪಾತವಾಗಿ ಪ್ರಮಾಣಿಕವಾಗಿ ಕೆಲಸ ಮಾಡಲು ಮುಂದಾಗಬೇಕೆಂದರು.
ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ನಗರಸಭೆ ಅಧ್ಯಕ್ಷ ಎಂಡಿ ಸಗೀರೋದ್ದಿನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ, ರಾಜ್ಯ ಪ್ರತಿನಿಧಿ ಬಸವರಾಜ ಕಾಮಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ನಿವೃತ್ತ ಅಭಿಯಂತರ ಚಂದ್ರಶೇಖರ್ ದುಬೆ ಉಪಸ್ಥಿತರಿದ್ದರು.ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರೆ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು ಡಿಕೆ.ಪ್ರಲ್ಹಾದ ವಂದಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿಯ ಹಿರಿಯ ಪತ್ರಕರ್ತ ಚಂದ್ರಕಾಂತ ಹುಣಸಗಿ ಅವರಿಗೆ ಶಂಕರಪ್ರಸಾದ ದುಬೆ ವಿಭಾಗ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು. ಸಂಘದ ಪ್ರತಿಭಾ ಪುರಸ್ಕಾರ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೃತಿ ಕಲ್ಯಾಣರಾವ ಮದರಗಾಂವಕರ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಅಲ್ಲದೇ ಜಿಲ್ಲೆಯ ವಿವಿಧ ಪತ್ರಕರ್ತರನ್ನು ಸನ್ಮಾನಿಸಲಾಯಿತು.