ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರಾಗಿರುವ ಭಾರತ ದೇಶದಲ್ಲಿ ಬಹು ಭಾಷೆ, ಧರ್ಮ, ಜಾತಿ ಸಂಸ್ಕೃತಿಗಳು ಬೆಳೆದಿವೆ. ರಾಷ್ಟ್ರೀಯ ಶಿಬಿರಗಳ ಮೂಲಕ ಯುವಕರಲ್ಲಿ ಏಕತೆ, ಸಹೋದರತೆ ಮತ್ತು ಭಾವೈಕ್ಯತೆಯ ಭಾವನೆ ಬೆಳೆಸುವುದು ಅಗತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಡಾ. ಬಿ.ಶರಣಪ್ಪ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ "ರಾಷ್ಟ್ರೀಯ ಭಾವೈಕ್ಯತಾ ಶಿಬಿರ "ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಷ್ಟ್ರೀಯ ಭಾವೈಕ್ಯತೆ ಶಿಬಿರದಿಂದ ವಿವಿಧ ರಾಜ್ಯಗಳ ಸಂಸ್ಕೃತಿ ವಿನಿಮಯ, ಪರಸ್ಪರ ಸ್ನೇಹ ಮನೋಭಾವ ಬೆಳೆಯುತ್ತದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ರಾಸೇಯೋ ತಂಡಗಳು ವಾರಗಳ ಕಾಲ ಗುಲಬರ್ಗಾ ಆವರಣದಲ್ಲಿ ಶ್ರಮದಾನ, ಯೋಗ ಶಿಬಿರ ಸಾಂಸ್ಕೃತಿಕ ಸ್ಪರ್ಧೆಗಳಿಂದ ಅನ್ಯೋನ್ಯತೆ ಬೆಳೆಯುತ್ತದೆ. ಸಂವಿಧಾನ ಅಸ್ಮಿತೆಯಂತೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಮನೋಭಾವ ಬೆಳೆಯಲು ಪ್ರೇರಣೆ ಸಿಗಲಿದೆ. ಸ್ವಾಮಿ ವಿವೇಕಾನಂದರ ‘ಸಹೋದರತೆಯ ಭಾವನೆ’ ಹಾಗೂ ಕುವೆಂಪು ಅವರ ‘ವಿಶ್ವಮಾನವ ಸಂದೇಶ’ ಹಾಗೂ ಪಂಪನ ‘ಮಾನವ ಕುಲ ತಾನೋದೆ ಛಲಂ’ ಎಂಬ ವೈಚಾರಿಕ ಜ್ಞಾನದಿಂದ ಏಕತೆ ಮತ್ತು ಭಾವೈಕ್ಯತೆ ಸಂಸ್ಕೃತಿ ಪ್ರಭುತ್ವ ಸಾಧಿಸಬಹುದು ಎಂದರು.ಮೌಲ್ಯಮಾಪನ ಕುಲಸಚಿವ ಜ್ಯೋತಿ ದಮ್ಮ ಪ್ರಕಾಶ ಮಾತನಾಡಿ, ಶಿಕ್ಷಣದ ಮೂಲಕ ಸಮಾಜ ಸೇವೆಗೆ ಸಮರ್ಪಿಸಿಕೊಳ್ಳುವ ಅತ್ಯುತ್ತಮ ಕಾರ್ಯ ರಾಷ್ಟ್ರೀಯ ಶಿಬಿರದಿಂದ ಸಾಧ್ಯವಾಗುತ್ತದೆ. ಸೇವೆ ಮೂಲಕ ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಸೇಯೋ ವಿದ್ಯಾರ್ಥಿ ಸ್ವಯಂ ಸೇವಕರು ತಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ವಿವಿಧ ಜಾನಪದ ನೃತ್ಯ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಎನ್‍ಎಸ್‍ಎಸ್ ಸಂಯೋಜನಾಧಿಕಾರಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಡಾ. ಪಂಡಿತ್ ವಿ.ಕೆ. ಅವರನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.ವಿವಿಧ ರಾಜ್ಯಗಳ ರಾಸೇಯೋ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶಿಬಿರ ಕುರಿತು ಅನಿಸಿಕೆ ಹಂಚಿಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಹಾಗೂ ರಾಸೇಯೋ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕರ್ನಾಟಕ ತಂಡದ ಶ್ರೀಗೌರಿ ಹಾಗೂ ಸಂಗಡಿಗರು ರಾಸೇಯೋ ಗೀತೆ ಹಾಡಿದರು. ಡಾ. ಸಂಗಪ್ಪ ಮಹನ್‍ಶೆಟ್ಟಿ ಸ್ವಾಗತಿಸಿದರು. ಕಲಬುರಗಿ ಸರ್ಕಾರಿ (ಸ್ವಾಯತ್ತ) ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ. ಮೇರಿ ಮೆಥ್ವಿ ಕಾರ್ಯಕ್ರಮ ನಿರ್ವಹಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎನ್. ಜಿ. ಕಣ್ಣೂರು ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))