ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ವಿಜ್ಞಾನ ಶಿಕ್ಷಕರು ಇಂದಿನ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಆರ್ಥಿಕ ಚಿಂತಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.ಹೊಸದುರ್ಗದ ನಿಜಲಿಂಗಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಖಗೋಳ ವಿಜ್ಞಾನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜ್ಞಾನವು ಕೇವಲ ಒಂದು ವಿಷಯವಾಗಿರದೆ ಜೀವನದ ದಾರಿದೀಪವಾಗಿದೆ. ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಹೆಚ್ಚು ತಿಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಖಗೋಳ ಕುರಿತ ಉಪನ್ಯಾಸ ನೀಡಿದ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್ಎಸ್‌ಟಿ ಸ್ವಾಮಿ, ಇಂದು ವಿಜ್ಞಾನ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನವನ್ನು ಬಿಟ್ಟು ಬದುಕೇ ಇಲ್ಲದ ಸ್ಥಿತಿ ಎದುರಾಗಿದೆ. ವಿಜ್ಞಾನ ನಮ್ಮ ಜೀವನವನ್ನು ಸುಧಾರಿಸಿದೆ. ಅದರಲ್ಲಿಯೂ ಖಗೋಳ ವಿಜ್ಞಾನ ತುಂಬಾ ಅಭಿವೃದ್ಧಿ ಪಥದತ್ತ ಸಾಗಿದೆ ಎಂದು ಹೇಳಿದರು.ಕೆಲವೇ ವರ್ಷಗಳಲ್ಲಿ ನಮ್ಮ ಭಾರತೀಯರು ಚಂದ್ರ ಮತ್ತು ಮಂಗಳಗ್ರಹಕ್ಕೆ ಹೆಜ್ಜೆ ಇಡಲಿದ್ದಾರೆ. ಮಾನವ ಸಹಿತ ನೌಕೆಗಳನ್ನು ಕಳುಹಿಸಲು ಇಸ್ರೋ ವಿಜ್ಞಾನ ಸಂಸ್ಥೆ ಸಿದ್ಧವಾಗುತ್ತಿದೆ. ಇಷ್ಟೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತುಂಗಕ್ಕೆ ಏರಿದ್ದರೂ, ಜನರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇದೆ. ನಾವೆಲ್ಲರೂ ವೈಚಾರಿಕತೆಯ ಹಾದಿಯಲ್ಲಿ ಬದುಕು ಕಟ್ಟಿಕೊಂಡು, ವಿದ್ಯಾರ್ಥಿಗಳಿಗೂ ವೈಚಾರಿಕ ಚಿಂತನೆ ಬೆಳೆಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಗ್ರಹ, ನಕ್ಷತ್ರಗಳು, ಗೆಲಾಕ್ಸಿ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಸೈನ್ಸ್ ಫೌಂಡೇಶನ್ ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ, ಪ್ರಾಂಶುಪಾಲ ಬಸಪ್ಪ, ನಿಸ್ಸಾರ್ ಅಹಮದ್, ಕಲ್ಮಠ್ ಹಾಗೂ ಬಿ.ಎಂ.ತಿಪ್ಪೇಸ್ವಾಮಿ, ಕಾಲೇಜಿನ ಉಪನ್ಯಾಸಕ ವರ್ಗ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.