ಸಾರಾಂಶ
ವಿದ್ಯಾರ್ಥಿವೇತನ ಪರೀಕ್ಷೆ ಕಾರ್ಯಕ್ರಮ
ಚಾಮರಾಜನಗರ: ವಿದ್ಯಾರ್ಥಿ ವೇತನ ಪರೀಕ್ಷೆ ಕಾರ್ಯಕ್ರಮವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋತ್ಸಾಹಿಸಲು ಪೂರಕವಾಗಿದೆ ಎಂದು ಎಂಸಿಎಸ್ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎಂ.ನಾಗರಾಜು ಹೇಳಿದರು.
ನಗರದ ಸೋಮವಾರಪೇಟೆಯ ಎಂಸಿಎಸ್ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಮೂಡುಬಿದಿರೆ ವೈಬ್ರೆಂಟ್ ಆಕಾಡೆಮಿ, ವೈಬ್ರೆಂಟ್ ಸಿಎನ್ಎಂ ಪಿಯು ಕಾಲೇಜು ಮೈಸೂರು ವತಿಯಿಂದ ನಡೆದ ವಿದ್ಯಾರ್ಥಿವೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮೂಡುಬಿದಿರೆ ವೈಬ್ರೆಂಟ್ ಅಕಾಡೆಮಿ, ವೈಬ್ರೆಂಟ್ ಸಿಎನ್ಎಂ ಪಿಯು ಕಾಲೇಜು ಮೈಸೂರು ವತಿಯಿಂದ ನಡೆಸುತ್ತಿರುವ ವಿದ್ಯಾರ್ಥಿವೇತನ ಪರೀಕ್ಷೆಯು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ವರದಾನವಾಗಿದೆ. ಇಂತಹ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ವೈಬ್ರೆಂಟ್ ಸಿಎನ್ಎಂ ಪಿಯು ಕಾಲೇಜು ಆಡಳಿತ ಅಧಿಕಾರಿ ಶಾರದಪ್ರಸಾದ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಅಯೋಜಿಸಿದ್ದ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ 700 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 2 ವರ್ಷಗಳ ಕಾಲ ಗುಣಮಟ್ಟದ ಶಿಕ್ಷಣ ದೊರಕಲಿದ್ದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದರು.ಓದಿನಲ್ಲಿ ಮುಂದಿರುವ ಮಕ್ಕಳು ಆರ್ಥಿಕ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಾರೆ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೆ ಇಂತಹ ವಿದ್ಯಾರ್ಥಿವೇತನ ಪರೀಕ್ಷೆ ವರದಾನವಾಗಿದೆ ಎಂದರು.
ಮೈಸೂರು ವೈಬ್ರೆಂಟ್ ಸಿಎನ್ಎಂ ಪಿಯು ಕಾಲೇಜು ಪ್ರಾಂಶುಪಾಲ ಕೆ.ಎಸ್.ನಾಗೇಶ್, ಎಂಸಿಎಸ್ ಪಬ್ಲಿಕ್ ಶಿಕ್ಷಣ ಸಂಸ್ಥೆ ಪ್ರೌಢ ವಿಭಾಗದ ಮುಖ್ಯ ಶಿಕ್ಷಕ ಎಚ್.ಎಂ.ಮಹದೇವಸ್ವಾಮಿ ಮಾತನಾಡಿದರು.ಎಂಸಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕೆ.ಶಶಿಧರಮೂರ್ತಿ, ವೈಬ್ರೆಂಟ್ ಅಕಾಡೆಮಿಯ ಸಂಯೋಜಕ ಪಿ.ಎಸ್.ರಾಜಶೇಖರಮೂರ್ತಿ, ಶಿಕ್ಷಕ ಸಿ.ಎನ್.ಸಂಪತ್ ಕುಮಾರ್, ಸಂಸ್ಥೆ, ಶಾಲೆಯ ಸಿಬ್ಬಂದಿ ಹಾಜರಿದ್ದರು.