ಚಿತ್ರದುರ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಳ್ಳಿ ಶಿವಪ್ರಸಾದ್ ಅವರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಷ್ಯ ಬದುಕಿನಲ್ಲಿ ಶಾಂತಿ ಕಳೆದುಕೊಂಡು ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಮಾನವ ಸಂಬಂಧಗಳು ಉತ್ತಮಗೊಳ್ಳಬೇಕಾದರೆ ಕಲೆ, ಸಾಹಿತ್ಯ, ಸಂಸ್ಕಾರದಲ್ಲಿ ಮನುಷ್ಯ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಳ್ಳಿ ಶಿವಪ್ರಸಾದ್ ತಿಳಿಸಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಶ್ರೀ ಮಾರುತಿ ಸಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸಂಗೀತೋತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಧಾಟಿಸಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ಯುದ್ಧದಂತಹ ಪರಿಸ್ಥಿತಿ ನೋಡಬೇಕಾಗಿದೆ. ಶಾಂತಿಯತ ಸಮಾಜ ನಿರ್ಮಾಣ ಮಾಡುವ ಅಗತ್ಯವಿದೆ. ಆಧುನಿಕತೆ ಕಡೆಗೆ ಹೆಚ್ಚು ಮುಖ ಮಾಡಿದಂತೆ ಮನುಷ್ಯತ್ವ ಕಳೆದುಕೊಳ್ಳುತಿದ್ದೇವೆ. ಕಲೆ, ಸಾಹಿತ್ಯ, ಸಂಗೀತ ಹಾಗು ಸಾಂಸ್ಕೃತಿಕ ವಾತಾವರಣದಿಂದ ಸಮಾಜವನ್ನು ತಿದ್ದುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸರ್ಕಾರದ ಅಕಾಡೆಮಿಗಳು ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಜಿಲ್ಲೆಯ ಮ್ಯಾಸಬೇಡರ ಬುಡುಕಟ್ಟು ಸಂಸ್ಕೃತಿ, ಕಾಡುಗೊಲ ಬುಡುಕಟ್ಟು ಸಂಸ್ಕೃತಿಗಳಿಂದ ಅನೇಕ ವಿಚಾರಗಳನ್ನು ತಿಳಿಯಬಹುದಾಗಿದೆ. ಬುಡುಕಟ್ಟು ಸಂಸ್ಕೃತಿಯಿಂದ ಇಂದು ಜನಪದ ಸಂಸ್ಕೃತಿ ಉಳಿದಿದೆ. ಇಂದಿನ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಜನಪದ ಕಲೆಯನ್ನು ಉಳಿಸಿ ಬೆಳಸಬೇಕಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಸಂಗೀತಗಾರ ತೋಟಪ್ಪ ಉತ್ತಂಗಿ, ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸೃತ ಆಯಿತೋಳು ವಿರುಪಾಕ್ಷಪ್ಪ, ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕಲಮರಳ್ಳಿ, ಹಿರಿಯ ರಂಗಭೂಮಿ ಕಲಾವಿದ ಜಿ.ಎನ್.ಚಂದ್ರಪ್ಪ, ಕಲಾವಿದ ಗೋಂದಾಳಪ್ಪ, ಕಲಾವಿದ ಚನ್ನಬಸಪ್ಪ ಚೋಳಗುಡ್ಡ, ಸೋಬಾನೆ ಕಲಾವಿದೆ ಸಿದ್ಧಮ್ಮ ಗಂಜಿಗಟ್ಟೆ, ಜಿ.ಎನ್.ಚಂದ್ರಪ್ಪ, ಚನ್ನಬಸಪ್ಪ ಚೋಳಗುಡ್ಡ, ಸಿದ್ಧಮ್ಮ ಗಂಜಿಗಟ್ಟೆ. ಉಪ್ಪನಾಯಕಹಳ್ಳಿ ಚಂದ್ರಪ್ಪ, ಸರ್ಕಾರಿ ನೌಕರ ಸಂಘ ಜಿಲ್ಲಾ ಅಧ್ಯಕ್ಷ ಮಾಲತೇಶ್ ಮುದ್ದಜಿ, ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ, ಮಾರುತಿ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಜಿ.ವಿ.ಮಾರುತೇಶ, ವಕೀಲರ ಸಂಘದ ಕಾರ್ಯದರ್ಶಿ ಜಗದೀಶ್ ಇದ್ದರು.