ಭಗವಾನ್ ಮಹಾವೀರ ಅವರ ಅಹಿಂಸೆಯ ತತ್ವ, ಆದರ್ಶಗಳನ್ನು ಪಾಲನೆ ಮಾಡುವುದು ಇಂದಿನ ಅಗತ್ಯತೆಯಾಗಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರು: ಭಗವಾನ್ ಮಹಾವೀರ ಅವರ ಅಹಿಂಸೆಯ ತತ್ವ, ಆದರ್ಶಗಳನ್ನು ಪಾಲನೆ ಮಾಡುವುದು ಇಂದಿನ ಅಗತ್ಯತೆಯಾಗಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ., ಜೈನ ಸೊಸೈಟಿ ಮಂಗಳೂರು ವತಿಯಿಂದ ಬಜಿಲಕೇರಿ ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ಸೋಮವಾರ ಭಗವಾನ್ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಸಮಾನತೆ ಇದ್ದರೆ ಯಾವುದೇ ಸಂಘರ್ಷ ಉಂಟಾಗದು. ಶಾಂತಿ, ಅಹಿಂಸೆಯ ಸಮಾಜ ನಿರ್ಮಾಣಕ್ಕೆ ಸಮಾನತೆ ಸಹಬಾಳ್ವೆ ಅಗತ್ಯ. ಈ ನಿಟ್ಟಿನಲ್ಲಿ ಮಹಾವೀರರ ಸಂದೇಶಗಳು ಪ್ರೇರಣಾದಾಯಿಯಾಗಿವೆ ಎಂದರು.ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಮಾತನಾಡಿ, ಭಗವಾನ್ ಮಹಾವೀರರ ತತ್ವಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ. ಅವುಗಳನ್ನು ನಾವು ಪಾಲಿಸಿಕೊಂಡು ಇತರರಿಗೂ ಬದುಕುವ ಅವಕಾಶವನ್ನು ನೀಡಬೇಕು ಎಂದರು.
ಮೂಡುಬಿದಿರೆ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಉಪನ್ಯಾಸ ನೀಡಿದರು. ಜೈನ್ ಮಿಲಾನ್ ಅಧ್ಯಕ್ಷ ರತ್ನಾಕರ್ ಜೈನ್, ಮಂಗಳೂರು ಜೈನ ಸೊಸೈಟಿ ಗೌರವಾಧ್ಯಕ್ಷ ಸುರೇಶ್ ಬಲ್ಲಾಲ್, ಕಾರ್ಯದರ್ಶಿ ಸಚಿನ್ ಜೈನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಇದ್ದರು.ಜೈನ್ ಸೊಸೈಟಿಯ ಅಧ್ಯಕ್ಷ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಜೈನ ಸೊಸೈಟಿಯ ನಿರ್ದೇಶಕ ಸುಕುಮಾರ್ ಬಲ್ಲಾಲ್ ನಿರೂಪಿಸಿದರು.