ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಜೆಎಂಎಪ್‌ಸಿ ಹಿರಿಯ ಸಿವಿಲ್ ಪ್ರಧಾನ ನ್ಯಾಯಾಧೀಶ ವೈ.ಕೆ. ಬೇನಾಳ್ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಹೊಸದುರ್ಗ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಸೈಬರ್ ಕ್ರೈಂ, ಮಾದಕ ವಸ್ತು, ಸಂಚಾರ ಸುರಕ್ಷತೆ, ಬಾಲ್ಯವಿವಾಹ, ಮಹಿಳೆ ಮೇಲಿನ ದೌರ್ಜನ್ಯ ತಡೆ ಬಗ್ಗೆ ಜಾಗೃತಿ ಕಾರ್ಯಕ್ರಮ, ಪ್ರಾತ್ಯಕ್ಷಿಕೆ ಮತ್ತು ಆಯುಧ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೈಬರ್ ಕ್ರೈಂ ಜಗತ್ತಿನ ಅಪರಾಧವಾಗಿದ್ದು, ಚಿಕ್ಕ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ, ಸಂಚಾರಿ ನಿಯಮಗಳ ಪಾಲನೆ ಕುರಿತು ಪೊಲೀಸ್ ಇಲಾಖೆ ಆಯೋಜಿಸಿರುವ ಮೂರು ದಿನಗಳ ಕಾರ್ಯಾಗಾರ ಸಾರ್ವಜನಿಕರ ಹಿತದೃಷ್ಠಿಯಿಂದ ಉಪಯೋಗಿ ಕಾರ್ಯಕ್ರಮ ಆಗಿದೆ ಎಂದರು.ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಸನ್ನ ಕುಮಾರ್ ಮಾತನಾಡಿ, ಪ್ರಜ್ಞಾವಂತ ಜನರೇ ಸೈಬರ್ ಕ್ರೈಮ್ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಸುವಾಗ ಅಥವಾ ಆನ್‌ಲೈನ್‌ನಲ್ಲಿ ಯಾವುದೇ ವಿಚಾರ ಹುಡುಕುವಾಗ ಎಚ್ಚರದಿಂದರಬೇಕು. ಇಲ್ಲವಾದಲ್ಲಿ ಸೈಬರ್ ವಂಚಕರ ಮೋಸದ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ವಂಚಕರು ಎಲ್ಲೋ ಕುಳಿತು ಸೈಬರ್ ಅಪರಾಧಗಳನ್ನು ಎಸಗುತ್ತಾರೆ. ಅಂತವರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ ಆಗಿದೆ. ಉಚಿತವಾಗಿ ಸಿಗುವ ಆ್ಯಪ್‌ಗಳಿಂದ ಅಪಾಯ ಹೆಚ್ಚು. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಪ್ಲಿಕೇಷನ್‌ನಲ್ಲಿ ಕೇಳುವ ಎಲ್ಲಾಮಾಹಿತಿ ಒದಗಿಸಬೇಕಾಗುತ್ತದೆ. ಇದರಿಂದಲೂ ಮೋಸ ಹೋಗುವ ಸಾಧ್ಯತೆ ಹೆಚ್ಚು ಎಂದರು.
ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ತಂತ್ರಜ್ಞಾನ ಆವಿಷ್ಕಾರವಾದಂತೆ ಅಪರಾಧಗಳು ಹೆಚ್ಚಾಗುತ್ತವೆ. ಅಪರಾಧದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಳ್ಳರು ಆಧುನಿಕ ತಂತ್ರಜ್ಞಾನದ ಮೂಲಕ ನಮ್ಮನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ. ಅತಿ ಹೆಚ್ಚು ಮೊಬೈಲ್ ಬಳಸುವ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂದರು.ಡಿವೈಎಸ್‌ಪಿ ಶಿವಕುಮಾರ್ ಮಾತನಾಡಿ, ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ನಾಗರಿಕರು ಈ ಕಾರ್ಯಕ್ರಮದಿಂದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯಕ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಕೆ.ಟಿ.ರಮೇಶ್, ಮಧು, ಸೈಬರ್ ಇನ್ಸ್‌ಪೆಕ್ಟರ್ ವೆಂಕಟೇಶ್, ಸಬ್ ಇನ್ಸ್‌ಪೆಕ್ಟರ್ ಭೀಮನಗೌಡ ಪಾಟೀಲ್, ಶ್ರೀಶೈಲ, ಮಹೇಶ್, ಮಂಜುನಾಥ್, ತಾಲೂಕ ಆರೋಗ್ಯಾಧಿಕಾರಿ ರಾಘವೇಂದ್ರ ಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಎಚ್.ಬಿ.ರವಿಕುಮಾರ್, ವಕೀಲರಾದ ಇ.ಟಿ.ರಮೇಶ್, ಜಗದೀಶ್ ನಾಯ್ಕ್ ಮತ್ತಿತರರಿದ್ದರು.