ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಿಸುವುದು ಅಗತ್ಯ: ಡಾ. ಎಸ್.ಜಿ. ವೈದ್ಯ

| Published : Mar 23 2025, 01:34 AM IST

ಸಾರಾಂಶ

ಬ್ಯಾಡಗಿ ಪಟ್ಟಣದ ಬಿಇಎಸ್ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶಹೀದ ದಿವಸ್ ಮುನ್ನಾ ದಿನವಾದ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಬ್ಯಾಡಗಿ: ದೇಶದ ಸಾರ್ವಭೌಮತ್ವದ ಮರುಸ್ಥಾಪನೆಗೆ ಲಕ್ಷಾಂತರ ದೇಶ ಭಕ್ತರು ತಮ್ಮ ನೆತ್ತರನ್ನು ಹರಿಸಿ ಪ್ರಾಣತ್ಯಾಗ ಮಾಡಿದ್ದಾರೆ. ಅಂಥವರನ್ನು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳದಿದ್ದರೆ ಭಾರತೀಯ ಪ್ರಜೆಯಾಗಿ ಬದುಕುವ ನೈತಿಕ ಹಕ್ಕು ಕಳೆದುಕೊಳ್ಳಲಿದ್ದೇವೆ ಎಂದು ಬಿಇಎಸ್ ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಬಿಇಎಸ್ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶಹೀದ ದಿವಸ್ ಮುನ್ನಾ ದಿನವಾದ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಾ. 23, 1931ರಂದು ದೊಡ್ಡ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಸ್ವಾತಂತ್ರ್ಯ ಸೇನಾನಿಗಳು ಮತ್ತು ಮಹಾನ್ ದೇಶ ಭಕ್ತರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗಗಳು ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಆದರೆ ಅವರನ್ನು ಸೆರೆಹಿಡಿದ ಬ್ರಿಟಿಷರು ಗಲ್ಲಿಗೇರಿಸಿದ ದಿನವಾಗಿತ್ತು ಎಂದರು.

ರಾಷ್ಟ್ರೀಯ ಏಕತೆ ಬಲವರ್ಧನೆ: ಉಪನ್ಯಾಸಕ ಡಾ. ಎನ್.ಎಸ್. ಪ್ರಶಾಂತ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಕುರಿತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜಾಗೃತಿ ನೀಡುವ ಮೂಲಕ ಯುವಕರಿಗೆ ಸ್ಫೂರ್ತಿ ನೀಡಿದಂತಾಗಲಿದೆ. ಇಂತಹ ಕಾರ್ಯಕ್ರಮಗಳಿಂದ ಯುವಕರಲ್ಲಿ ರಾಷ್ಟ್ರೀಯ ಏಕತೆ ಕೂಡ ಬಲವರ್ಧನೆಗೊಳ್ಳಲಿದೆ. ಅಲ್ಲದೇ ದೇಶದ ಯುವಕರಿಗೆ ತಮ್ಮ ಜವಾಬ್ದಾರಿ ನೆನಪಿಸುವ ದಿನ ಇದಾಗಿದ್ದು, ಶಹೀದ್ ದಿವಸ್ ಆಚರಣೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶ ಭಕ್ತರ ವಿರುದ್ಧ ನಡೆದ ಅನ್ಯಾಯದ ಕ್ರಮಗಳನ್ನು ಖಂಡಿಸುವುದು, ಅವರ ಆದರ್ಶಗಳನ್ನು ಕಾಪಾಡುವ ಹಾಗೂ ದೇಶಕ್ಕಾಗಿ ಸಮರ್ಪಣಾ ಮನೋಭಾವನೆ ಮೂಡಿಸಲು ಸಹಕಾರಿಯಾಗಲಿದೆ ಎಂದರು.

ದೇಶ ಭಕ್ತಿಯ ದ್ಯೋತಕ: ಉಪನ್ಯಾಸಕ ಡಾ. ಸುರೇಶಕುಮಾರ ಪಾಂಗಿ ಮಾತನಾಡಿ, ಹುತಾತ್ಮರನ್ನು ಗೌರವಿಸುವುದು ಸ್ಮಾರಕಗಳ ನಿರ್ಮಾಣ, ಸ್ವಾತಂತ್ರ್ಯ ವೀರರಿಗೆ ಗೌರವ ಸಲ್ಲಿಸುವುದು ದೇಶದೆಲ್ಲೆಡೆ ನಿರಂತರವಾಗಿ ನಡೆದು ಬರುತ್ತಿದೆ. ಇದರಿಂದ ಬರುವ ಪೀಳಿಗೆಗೆ ಕ್ರಾಂತಿಕಾರಿ ಹೋರಾಟಗಳು ಸ್ಫೂರ್ತಿಯ ಸೆಲೆಯಾಗಿ ನಿಲ್ಲಲಿವೆ, ದೇಶಭಕ್ತಿಯ ಮೌಲ್ಯಗಳನ್ನು ಎತ್ತಿಹಿಡಿಯಲು ಯುವಕರನ್ನು ಪ್ರೋತ್ಸಾಹಿಸಲಿದೆ. ಅವರ ಧೈರ್ಯ, ಸಾಹಸ, ಶೌರ್ಯ ಮತ್ತು ತ್ಯಾಗದ ಕುರಿತು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗುತ್ತದೆ. ಹೀಗಾಗಿ ಅವರನ್ನು ನೆನೆಯುವುದು ಸಹ ದೇಶಭಕ್ತಿಯ ದ್ಯೋತಕವಾಗಲಿದೆ ಎಂದರು.

ಉಪನ್ಯಾಸಕರಾದ ಡಾ. ಪ್ರಭುಲಿಂಗ ದೊಡ್ಮನಿ, ಡಾ. ಎ.ಎಸ್. ರಷ್ಮಿ, ಪ್ರವೀಣ ಬಿದರಿ, ಪ್ರಶಾಂತ ಜಂಗಳೇರ, ಶಶಿಧರ ಮಾಗೋಡ, ಕಿರಣ ಡಂಬರಮತ್ತೂರ, ಶಿವನಗೌಡ ಪಾಟೀಲ, ಜ್ಯೋತಿ ಹಿರೆಮಠ, ನಿವೇದಿತ ವಾಲಿಶೆಟ್ಟರ, ಅಂಬಿಕಾ ನವಲೆ, ಸಂತೋಷ ಉದ್ಯೋಗಣ್ಣನವರ, ಎಂ.ಆರ್. ಕೋಡಿಹಳ್ಳಿ ಹಾಗೂ ಇನ್ನಿತರರಿದ್ದರು.