ಕೆರೆಗಳ ಸಂರಕ್ಷಣೆ ಪ್ರಮುಖ ಕರ್ತವ್ಯ: ಬಸವಂತಪ್ಪ

| Published : Jan 14 2024, 01:33 AM IST / Updated: Jan 14 2024, 05:54 PM IST

ಸಾರಾಂಶ

ಅರಣ್ಯ, ಗಿಡಗಳು, ಕೆರೆ ಕಟ್ಟೆಗಳು ಇವೆಲ್ಲ ನಮ್ಮದಾಗಿದ್ದು, ಇವುಗಳ ಸಂರಕ್ಷಣೆ ಜವಾಬ್ದಾರಿ ನಮ್ಮ ಮೇಲೆ ಇದೆ. ಓಡೋ ನೀರನ್ನು ನಿಲ್ಲಿಸಬೇಕು, ನಿಲ್ಲಿಸಿ ಸಂಗ್ರಹಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ರೈತರಿಗೆ ಕಿವಿಮಾತು.

ದಾವಣಗೆರೆ: ಅರಣ್ಯ, ಗಿಡಗಳು, ಕೆರೆ ಕಟ್ಟೆಗಳು ಇವೆಲ್ಲ ನಮ್ಮದಾಗಿದ್ದು, ಇವುಗಳ ಸಂರಕ್ಷಣೆ ಜವಾಬ್ದಾರಿ ನಮ್ಮ ಮೇಲೆ ಇದೆ. ಓಡೋ ನೀರನ್ನು ನಿಲ್ಲಿಸಬೇಕು, ನಿಲ್ಲಿಸಿ ಸಂಗ್ರಹಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ರೈತರಿಗೆ ಕಿವಿಮಾತು ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚಿರಡೋಣಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆವತಿಯಿಂದ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮಪಂ, ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆರೆಯ ಹೂಳು ತೆಗೆಯುವ ಕಾಮಗಾರಿ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೆರೆಯಲ್ಲಿನ ಹೂಳು ತೆಗೆದು ನೀರು ಸಂಗ್ರಹಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಬೋರ್‌ವೆಲ್ ಹೊಂದಿರುವ ರೈತರು ತರಕಾರಿ, ಅಡಿಕೆ, ತೆಂಗಿನ ತೋಟಗಳಿಗೆ ನೀರುಣಿಸಿ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಸಲಹೆ ನೀಡಿದರು.

ಪೂರ್ವಜರು ತಮ್ಮ ಹೊಲ ಗದ್ದೆಗಳಲ್ಲಿ ನೀರು ಸಂಗ್ರಹಿಸಲು ಒಡ್ಡುಗಳನ್ನು ನಿರ್ಮಿಸುತ್ತಿದ್ದರು ಹಾಗೂ ಊರಿಗೊಂದು ಕೆರೆಯನ್ನು ನಿರ್ಮಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನೀರನ್ನು ಸಂಗ್ರಹಿಸದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. 

ಇಂತಹ ಸಂದರ್ಭದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆರೆಗಳ ಹೂಳು ತೆಗೆದು ನೀರು ಸಂಗ್ರಹಿಸುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಬಿ.ಮಲ್ಲಿಕಪ್ಪ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಮಾ ಎಸ್.ಅಶೋಕ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.