ಜನಪದ ಕಲೆಯಲ್ಲ ಅದೊಂದು ಜ್ಞಾನ ಶಾಖೆ: ಪ್ರೊ.ಶರತ್ ಅನಂತಮೂರ್ತಿ

| Published : May 29 2024, 12:49 AM IST / Updated: May 29 2024, 12:50 AM IST

ಸಾರಾಂಶ

ಜಾನಪದ ಅಧ್ಯಯನ ಇಂದು ಸಂಭ್ರಮದಿಂದ ಆರಂಭವಾಗಿದೆ. ಜಾಗತಿಕ ಸಂದರ್ಭದಲ್ಲಿ ಜಗತ್ತು ಬೇರೆಯೇ ದೃಷ್ಟಿ ಕೋನದಲ್ಲಿ ತೆರಳುತ್ತಿದೆ. ಅಲ್ಲಿ ನಮ್ಮ ಅಜ್ಜ, ಅಜ್ಜಿಯರ ಜ್ಞಾನ ಮತ್ತು ಜೀವನ ಅನುಭವಗಳಿಗೆ ಬೆಲೆಯಿಲ್ಲ. ಆಧುನಿಕತೆಯ ಭರದಲ್ಲಿರುವ ನಾವು ವಿಜ್ಞಾನಿಗಳಂತೆ ಯೋಚಿಸುವ ಬದಲು ಜ್ಞಾನ ಶಾಖೆಯಾದ ಜಾನಪದದಲ್ಲಿ ಒಳಗೊಂಡು ಅಧ್ಯಯನ ನಡೆಸಬೇಕಿದೆ‌.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜನಪದ ಕೇವಲ ಕಲೆಯಲ್ಲ ಅದೊಂದು ಅದ್ಭುತ ಜ್ಞಾನ ಶಾಖೆಯಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ಜಿಲ್ಲಾ‌ ಕರ್ನಾಟಕ ಜಾನಪದ‌ ಪರಿಷತ್ತಿನ ವತಿಯಿಂದ ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ, ಕಡೆಕೊಪ್ಪಲ ಪ್ರತಿಷ್ಠಾನ ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಸಹಯೋಗದಲ್ಲಿ ಮಂಗಳವಾರ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಆವರಣದಲ್ಲಿರುವ ಡಾ.ರಾಧಾಕೃಷ್ಣ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಜಾನಪದ ದಿಕ್ಕು ದೆಸೆ ಅಧ್ಯಯನ ಶಿಬಿರ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಜಾನಪದ ಅಧ್ಯಯನ ಇಂದು ಸಂಭ್ರಮದಿಂದ ಆರಂಭವಾಗಿದೆ. ಜಾಗತಿಕ ಸಂದರ್ಭದಲ್ಲಿ ಜಗತ್ತು ಬೇರೆಯೇ ದೃಷ್ಟಿ ಕೋನದಲ್ಲಿ ತೆರಳುತ್ತಿದೆ. ಅಲ್ಲಿ ನಮ್ಮ ಅಜ್ಜ, ಅಜ್ಜಿಯರ ಜ್ಞಾನ ಮತ್ತು ಜೀವನ ಅನುಭವಗಳಿಗೆ ಬೆಲೆಯಿಲ್ಲ. ಆಧುನಿಕತೆಯ ಭರದಲ್ಲಿರುವ ನಾವು ವಿಜ್ಞಾನಿಗಳಂತೆ ಯೋಚಿಸುವ ಬದಲು ಜ್ಞಾನ ಶಾಖೆಯಾದ ಜಾನಪದದಲ್ಲಿ ಒಳಗೊಂಡು ಅಧ್ಯಯನ ನಡೆಸಬೇಕಿದೆ‌ ಎಂದು ಅಭಿಪ್ರಾಯಪಟ್ಟರು.ಕರ್ನಾಟಕ ಜಾನಪದ ಪರಿಷತ್ತು ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ನಮ್ಮದೆ ಸಿದ್ದಾಂತ ಈ ನೆಲಕ್ಕೆ ಅನುಗುಣವಾಗಿ ಹುಡುಕುವ ಅಗತ್ಯವಿದೆ. ಸಂಸ್ಕೃತಿ ರಾಜಕೀಯ ಪ್ರೇರಿತವಾದ ಏಕ ಮುಖವಾಗಿ ಪರಿಭಾವಿಸಲ್ಪಡುತ್ತಿದೆ. ಆದರೆ ಸಂಸ್ಕೃತಿ ಕುರಿತು ಅಧ್ಯಯನ ಮಾಡುವಾಗ ಬಹುತ್ವವನ್ನು ಏಕ ಮುಖಿಗೊಳಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬಹುತ್ವದ ಕುರಿತಾಗಿ ಜನಪದ ಅಧ್ಯಯನಕಾರರು ಗಮನಿಸಬೇಕಿದೆ. ನಮ್ಮ ಕೀಳರಿಮೆ ಮೀರಿ ಜಾನಪದ ನೋಡಬೇಕಿದೆ ಎಂದು ವಿವರಿಸಿದರು.

ನಮ್ಮ ದೇಶದ ಚರಿತ್ರೆ ಕೇವಲ ಅರ್ಧ ಸತ್ಯವಾಗಿದೆ. ಜನ ಸಾಮಾನ್ಯರ ಚರಿತ್ರೆಯನ್ನು ಯಾರೂ ಹೇಳುತ್ತಿಲ್ಲ. ಈ ಚರಿತ್ರೆಯನ್ನು ಹೊಸ ರೀತಿಯಲ್ಲಿ ಬರೆಯುವ ಅಗತ್ಯವಿದೆ. ಅದನ್ನು ಬರೆಯಲು ಜಾನಪದ ವಿದ್ವಾಂಸರು ಶಕ್ತಿಯಾಗಬೇಕು. ಜನಪದ ಕಾವ್ಯಗಳೂ ಚರಿತ್ರೆಯನ್ನು ಹೇಳುತ್ತವೆ. ಹೀಗೆಯೇ ನಿರ್ಲಕ್ಷರ ಚರಿತ್ರೆಯನ್ನು ಮತ್ತಷ್ಟು ರೂಪಿಸಬೇಕಿದ್ದು, ಜನಪದದ ಕುರಿತು ಅಧ್ಯಯನ ಮಾಡುವ ನಮ್ಮ ಯುವ ಸಮೂಹ ಈ ಬಗ್ಗೆ ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್. ರಾಜೇಶ್ವರಿ, ಕನ್ನಡ ಅಧ್ಯಾಪಕರ ವೇದಿಕೆ ಉಪಾಧ್ಯಕ್ಷ ಪ್ರೊ.ಕುಂಸಿ ಉಮೇಶ್, ಕಡೆಕೊಪ್ಪಲ ಪ್ರತಿಷ್ಠಾನದ ಲಕ್ಷ್ಮೀನಾರಾಯಣ, ಡಾ.ಎಸ್.ಎಂ. ಮುತ್ತಯ್ಯ, ಮಂಗಳೂರು ವಿವಿ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನೆ, ಗುಲ್ಬರ್ಗ ವಿವಿ ಡಾ.ಅರುಣ್ ಜೋಳದ ಕೂಡ್ಲಿಗಿ, ಸಹ್ಯಾದ್ರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಸೈಯದ್ ಸನಾಉಲ್ಲಾ ಉಪಸ್ಥಿತರಿದ್ದರು.

ಜಾನಪದ ಕಲಾವಿದ ನಾಗರಾಜ್ ತೋಂಬ್ರಿ ಜೋಗಿಪದ ಹಾಡಿದರು. ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ. ವೆಂಕಟೇಶ್ ಸ್ವಾಗತಿಸಿ, ಡಾ.ಎಸ್.ಎಂ. ಮುತ್ತಯ್ಯ ಪ್ರಾಸ್ತಾವಿಕ ಮಾತನಾಡಿ, ಡಾ.ಹಾ.ಮ. ನಾಗಾರ್ಜುನ ವಂದಿಸಿದರು.ಜಾನಪದ ದುಡಿವ ವರ್ಗದ ಜನರ ಕಲೆ. ಅದರೇ ಇಂದು ನಕಲಿ ಕಲಾವಿದರಿಂದಾಗಿ ಮೂಲ ಜನಪದದ ಮಹತ್ವ ಕಡಿಮೆಯಾಗುತ್ತಿರುವುದು ನೋಡಿದಾಗ ಮರು ಚಿಂತನೆಯ ಅಗತ್ಯವಿದೆ ಎಂದು ಅನಿಸುತ್ತದೆ. ಎಂದಿಗೂ ಮೂಲ ಕಲೆಗೆ ಕಲಾವಿದರಿಗೆ ಬೆಲೆಯಿಲ್ಲದಂತಾಗಬಾರದು.

ಪ್ರೊ.ಶರತ್ ಅನಂತಮೂರ್ತಿ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ