ಕನ್ನಡಪ್ರಭ ವಾರ್ತೆ ಶಿಕಾರಿಪುರ

ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿದ್ದು, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದು ದಾಖಲೆ ಅಲ್ಲ, ಮುಖ್ಯಮಂತ್ರಿಯಾಗಿ ನಾಡಿನ ಜನತೆಯ ಸೇವೆ ಸಲ್ಲಿಸುವ ಅವಕಾಶ ದೊರೆತಾಗ ರೈತರು ಜನಸಾಮಾನ್ಯರ ಕಷ್ಟಕ್ಕೆ, ಸಮಸ್ಯೆಗೆ ಸ್ಪಂದಿಸಿದಲ್ಲಿ, ಕಣ್ಣೀರು ಒರೆಸಿದಲ್ಲಿ ಮಾತ್ರ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.

ಮಂಗಳವಾರ ತಾ.ಬಿಜೆಪಿ ರೈತ ಮೋರ್ಚಾ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಬದುಕಿದ್ದು ರೈತರ ಪಾಲಿಗೆ ಸತ್ತಂತಾಗಿದೆ ಎಂದು ಟೀಕಿಸಿದ ಅವರು, ಗಾಳಿ ಮಳೆಗೆ ಲಕ್ಷಾಂತರ ಅಡಿಕೆ ಮರ ಧರೆಗುರುಳಿದ್ದು ಸೂಕ್ತ ಪರಿಹಾರ, ವಿಮೆ ನೀಡಿ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳು, ಸಚಿವರನ್ನು ಕಳುಹಿಸಿ ರೈತರಿಗೆ ಸಾಂತ್ವನ ದೈರ್ಯ ತುಂಬಿ ಕಣ್ಣೀರು ಒರೆಸುವ ಬದಲು ಕುರ್ಚಿ ಉಳಿಸಿಕೊಳ್ಳಲು ಸಚಿವರ ಜತೆ ದೆಹಲಿಗೆ ತೆರಳಿ ಬೀಡು ಬಿಟ್ಟಿದ್ದಾರೆ. ಕುರ್ಚಿಗಾಗಿ ಹೋರಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಕಣ್ಣೀರು ಒರೆಸಲು ಸಾದ್ಯವಾಯಿತಾ? ಎಂಬುದನ್ನು ಅರಿತುಕೊಳ್ಳಲಿ ತಪ್ಪಿದಲ್ಲಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಜನತೆ ಬೇಡ ಎಂದರೂ ಗ್ಯಾರೆಂಟಿಗಾಗಿ ರೈತರಿಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಾರಿಗೊಳಿಸಿದ್ದ ಕಿಸಾನ್ ಸಮ್ಮಾನ್ ಯೋಜನೆ ರು.4 ಸಾವಿರ, ಹೈನುಗಾರಿಕೆಗೆ ಪ್ರೋತ್ಸಾಹ ಧನ ಕಳೆದ 3 ವರ್ಷದಿಂದ ನೀಡದೆ ಅಂದಾಜು 800 ಕೋಟಿ ರು. ಖಜಾನೆಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ವಿತರಿಸದೆ, ಹದಗೆಟ್ಟ ಮಳೆ ಮಾಪನ ಕೇಂದ್ರದ ದುರಸ್ತಿ ಬಗ್ಗೆ ಬರೆದ ಪತ್ರಕ್ಕೆ ಯಾವುದೇ ಸ್ಪಂದನೆ ಇಲ್ಲ. ಮುಂಗಾರು ಆರಂಭವಾಗುತ್ತಿದ್ದು, ರಸಗೊಬ್ಬರ ಸಾಗುವಳಿದಾರರಿಗೆ ನೀಡಲು ಸಾದ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ರೈತರ ಪರ ಕಿಂಚಿತ್ತು ಕಾಳಜಿಯಿಲ್ಲದ ಸರ್ಕಾರ ತೀವ್ರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.


ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೂಡಲೇ ಅತಿವೃಷ್ಠಿಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗೆ ಎನ್.ಡಿ.ಆರ್.ಎಫ್ ವತಿಯಿಂದ ರು.1.25 ಲಕ್ಷ ಪರಿಹಾರದ ಜತೆಗೆ ರು.4 ಲಕ್ಷ ರಾಜ್ಯ ಸರ್ಕಾರದಿಂದ ಕೂಡಲೇ ಬಿಡುಗಡೆಗೊಳಿಸಿದ್ದು, ಇದೀಗ ಮುಖ್ಯಮಂತ್ರಿಗಳ ಇಚ್ಚಾಶಕ್ತಿ ಕೊರತೆಯಿಂದ ರೈತರ ಜತೆಗೆ ಜನತೆ ಕಣ್ಣೀರು ಹಾಕುವಂತಾಗಿದೆ, ಕೇವಲ 20-30 ಸಾವಿರದಲ್ಲಿ ದುರಸ್ತಿಯಾಗುತ್ತಿದ್ದ ಟ್ರಾನ್ಸ್‌ಫಾರ್ಮರ್ ಇದೀಗ 2-3 ಲಕ್ಷ ಖರ್ಚು ಮಾಡಿದರೂ ಆಗುತ್ತಿಲ್ಲ, ಹಿಂದೆ ಗಂಗಾಕಲ್ಯಾಣ ಯೋಜನೆಯಲ್ಲಿ ವರ್ಷಕ್ಕೆ 200-300 ಬೋರ್ ವೆಲ್ ಕೊರೆಸಲಾಗುತ್ತಿದ್ದು, ಇದೀಗ 2-3 ನೀಡುತ್ತಿಲ್ಲ ಎಂದರು.

ತಾ.ರೈತ ಮೋರ್ಚಾ ಅಧ್ಯಕ್ಷ ಎಚ್.ಆರ್ ಯೋಗೀಶಪ್ಪ ಮಾತನಾಡಿ, ತಾಲೂಕಿನಲ್ಲಿ ಅಕಾಲಿಕ ಮಳೆಗೆ ಹಾನಿಯಾದ ಅಡಿಕೆ ಮರದ ಬಗ್ಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಪ್ರತಿಭಟನೆ ಕೇವಲ ಸಾಂಕೇತಿಕವಾಗಿದ್ದು, ಸರ್ಕಾರ ಸ್ಪಂದಿಸದಿದ್ದಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರದಲ್ಲಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಮುಖಂಡ ಗುರುಮೂರ್ತಿ, ಚನ್ನವೀರಪ್ಪ, ವಸಂತಗೌಡ, ಮಹೇಶ್ಹು ಲ್ಮಾರ್, ಬಂಗಾರಿನಾಯ್ಕ, ನಿವೇದಿತಾ, ರೇಖಾ, ಗಾಯತ್ರಿದೇವಿ, ಪಲ್ಲವಿ, ವೀರೇಂದ್ರ ಪಾಟೀಲ್, ತೊಗರ್ಸಿ ಹನುಮಂತಪ್ಪ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ರೈತರ ಕಣ್ಣೀರು ಒರೆಸುವ ಕೆಲಸ ಮಾಡಲಿ: ಸಂಸದ ಬಿವೈಆರ್‌

ಸಂಸದ ರಾಘವೇಂದ್ರ ಮಾತನಾಡಿ, ವಿರೋಧ ಪಕ್ಷದಲ್ಲಿದ್ದಾಗ ರೈತರ ಪರ ಹೋರಾಟ, ಮುಖ್ಯಮಂತ್ರಿಯಾಗಿ ರೈತರ ಕಣ್ಣೀರು ಒರೆಸಿದ ಯಡಿಯೂರಪ್ಪನವರು ರೈತರನ್ನು ದೇಶದ ಬೆನ್ನೆಲುಬು ಎಂದು ಬಾಷಣಕ್ಕೆ ಮಾತ್ರ ಸೀಮಿತವಾಗಿಸದೆ ಶಕ್ತಿ ನೀಡಿ ಗೌರವದ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಶಾಶ್ವತ ನೀರಾವರಿ ಕಲ್ಪಿಸಲಾಗಿದ್ದು, ಇದೀಗ ಧರಿದ್ರ ಸರ್ಕಾರಕ್ಕೆ ವಿದ್ಯುತ್ ಬಿಲ್ ಪಾವತಿಸಲಾಗುತ್ತಿಲ್ಲ ಎಂದು ಆರೋಪಿಸಿದ ಅವರು, ರೈತರು ಮೆಕ್ಕೆಜೋಳ ಮಾರಿಕೊಂಡ ನಂತರದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಅಧಿಕಾರ ದೊರೆತಾಗ ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ಶಾಶ್ವತವಾಗಿ ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ಇರಲು ಸಾದ್ಯವಿಲ್ಲ ಎಂಬ ಸತ್ಯ ಜ್ಞಾಪಕವಿರಲಿ ಎಂದು ಎಚ್ಚರಿಸಿದರು.