ಯುವ ವಕೀಲರು ಅಶಿಸ್ತಿನಿಂದ ವರ್ತಿಸುವುದು ಸರಿಯಲ್ಲ

| Published : Sep 11 2025, 01:00 AM IST

ಸಾರಾಂಶ

ಸಿವಿಲ್ ನ್ಯಾಯಾಧೀಶರ ಪರೀಕ್ಷಾರ್ಥಿಗಳಿಗೆ ಚಿತ್ರದುರ್ಗ ವಕೀಲರ ಸಂಘದಿಂದ ಹಮ್ಮಿಕೊಳ್ಳಲಾಗಿರುವ ತರಬೇತಿಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯುವ ವಕೀಲರು ನ್ಯಾಯಾಂಗದ ಕಾರ್ಯಕಲಾಪಗಳ ಗಂಭೀರತೆ ಅರಿತು ಶಿಸ್ತಿನಿಂದ ನಡೆದುಕೊಳ್ಲುವುದು ಅಗತ್ಯವೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ತಿಳಿಸಿದರು.

ಸಿವಿಲ್ ನ್ಯಾಯಾಧೀಶ ಪರೀಕ್ಷಾರ್ಥಿಗಳಿಗೆ ನ್ಯಾಯಾಧೀಶರುಗಳಿಂದ ಹಾಗೂ ಹಿರಿಯ ವಕೀಲರುಗಳಿಂದ ವಕೀಲರ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ತರಬೇತಿ ಉದ್ಗಾಟಿಸಿ ಮಾತನಾಡಿದ ಅವರು ನ್ಯಾಯಾಂಗ ಇಲಾಖೆಗೆ ತನ್ನದೆ ಆದ ಗೌರವವಿದೆ. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಅಶಿಸ್ತಿನಿಂದ ವರ್ತಿಸುವುದು ಸರಿಯಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಕೆಲವೊಮ್ಮೆ ಸಿಗುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ತರಬೇತಿ ಎಲ್ಲರಿಗೂ ಅತ್ಯವಶ್ಯಕ ಎಂದರು.

ಚಿತ್ರದುರ್ಗದ 850 ವಕೀಲರಲ್ಲಿ ನಾಲ್ಕು ನೂರು ಯುವ ವಕೀಲರುಗಳಿದ್ದಾರೆ. ನೇಪಾಳದಲ್ಲಿ ಆಗಿರುವ ಘಟನೆಯನ್ನು ನೋಡಿದರೆ ಯುವ ಶಕ್ತಿಯ ಗಟ್ಟಿತನ ಎಂತಹದ್ದು, ಎನ್ನುವುದು ಗೊತ್ತಾಗುತ್ತದೆ. ಎಂತಹ ಸರ್ಕಾರವನ್ನಾದರೂ ಕಿತ್ತು ಹಾಕಬಹುದು. ನಿಮ್ಮಲ್ಲಿರುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಸುಂದರ ದೇಶ ಕಟ್ಟಬಹುದು. ನ್ಯಾಯಾಧೀಶರ ಪರೀಕ್ಷಾರ್ಥಿಗಳಿಗೆ ತರಬೇತಿ ಅಗತ್ಯವೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಹೇಗೆ ಮತಚಲಾಯಿಸಬೇಕೆಂದು ಲೋಕಸಭೆ ಹಾಗೂ ರಾಜ್ಯಸಭೆ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಆದಾಗ್ಯೂ ಹದಿನೈದು ಮತಗಳು ತಿರಸ್ಕೃತಗೊಂಡಿರುವುದು ಮನಸ್ಸಿಗೆ ನೋವುಂಟು ಮಾಡುತ್ತದೆ. ಪ್ರತಿ ಮತಕ್ಕೂ ಬೆಲೆಯಿದೆ. ತರಬೇತಿ ಪಡೆದು ಪರೀಕ್ಷೆಗೆ ಸಿದ್ದರಾಗದಿದ್ದರೆ ಉತ್ತೀರ್ಣರಾಗುವುದು ಕಷ್ಟವಾಗುತ್ತದೆ ಎಂದರು.

ನನ್ನನ್ನು ಸೇರಿಕೊಂಡು ಚಿತ್ರದುರ್ಗ ನ್ಯಾಯಾಲಯದಲ್ಲಿ ಹನ್ನೊಂದು ನ್ಯಾಯಾಧೀಶರುಗಳು ಸೇವೆ ಸಲ್ಲಿಸುತ್ತಿದ್ದೇವೆ. ಗೊತ್ತಿರುವ ವಿಷಯವನ್ನು ತರಬೇತಿಯಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ. ಜಿಲ್ಲೆಯಿಂದ ಹೆಚ್ಚಿನ ನ್ಯಾಯಾಧೀಶರುಗಳು ನ್ಯಾಯಾಂಗ ಇಲಾಖೆಗೆ ಬರಬೇಕು. ಮೂರು ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಕಾನೂನು ವಿಷಯಗಳ ತರಬೇತಿ ಜೊತೆ ಗಣಕಯಂತ್ರಗಳ ಬಗ್ಗೆಯೂ ನೀವುಗಳು ತಿಳಿದುಕೊಂಡಿದ್ದರೆ ಒಳ್ಳೆಯದು. ತರಬೇತಿಯಲ್ಲಿ ಭಾಗವಹಿಸಿ ಜ್ಞಾನ ಪಡೆದುಕೊಂಡರೆ ಪರೀಕ್ಷೆಗಷ್ಟೆ ಅಲ್ಲ. ವೃತ್ತಿಗೂ ಸಹಾಯವಾಗಲಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡಿ ಎಪ್ಪತ್ತು ಯುವ ವಕೀಲರುಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಸಂಘದಿಂದ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ. ಒಮ್ಮೆ ಪರೀಕ್ಷೆಯಲ್ಲಿ ಫೇಲಾದೆವೆಂದು ಹಿಂದೆ ಸರಿಯುವುದು ಬೇಡ. ಸತತ ಪ್ರಯತ್ನದಿಂದ ಯಶಸ್ಸು ಕಾಣಬಹುದು. ವಕೀಲರ ಸಂಘದ ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದ ನಾನು ಎದೆಗುಂದದೆ ಮೂರನೇ ಸಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಗಣಕಯಂತ್ರಗಳ ಬಗ್ಗೆಯೂ ತರಬೇತಿ ನೀಡುವ ಕುರಿತು ಸಂಘದಲ್ಲಿ ಚರ್ಚಿಸುತ್ತೇನೆ. ಗುರಿ-ಆಸೆ, ಆಮಿಷ ದೊಡ್ಡದಿರಬೇಕೆಂದು ಪರೀಕ್ಷಾರ್ಥಿಗಳಿಗೆ ಸಲಹೆ ನೀಡಿದರು.

ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್, ಎರಡನೆ ಹೆಚ್ಚುವರಿ ನ್ಯಾಯಾಧೀಶರಾದ ಗಂಗಾಧರ್ ಅಡಪದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಮತ ಡಿ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಒಂದನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚೈತ್ರ ಎಂ. ಎರಡನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ, ಪ್ರಧಾನ ಸಿವಿಲ್ ನ್ಯಾಯಾಧೀಶರು ಕಿರಿಯ ವಿಭಾಗದ ರಶ್ಮಿ ಎಸ್.ಮರಡಿ, ಒಂದನೆ ಅಪರ ಸಿವಿಲ್ ನ್ಯಾಯಾಧೀಶ ಪೂಜಾ ಬೆಳಕೇರಿ, ಎರಡನೆ ಅಪರ ಸಿವಿಲ್ ನ್ಯಾಯಾಧೀಶ ನಿಖಿತ ಎಸ್.ಅಕ್ಕಿ, ಮೂರನೆ ಅಪರ ಸಿವಿಲ್ ನ್ಯಾಯಾಧೀಶ ಸಹನ ಆರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ, ಉಪಾಧ್ಯಕ್ಷೆ ಸಾವಿತ್ರಮ್ಮ, ಖಜಾಂಚಿ ಸೋಮಶೇಖರ್‍ರೆಡ್ಡಿ, ಸಹ ಕಾರ್ಯದರ್ಶಿ ಹೆಚ್.ಟಿ.ಕಾಂತರಾಜು ವೇದಿಕೆಯಲ್ಲಿದ್ದರು.