ಮಾಯಾವತಿ ಒಳಮೀಸಲಾತಿ ವಿರೋಧಿಸುತ್ತಿರುವುದು ಸರಿಯಲ್ಲ

| Published : Sep 06 2024, 01:00 AM IST

ಸಾರಾಂಶ

ಒಳಮೀಸಲಾತಿ ಬಗ್ಗೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿರುವುದರಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಮಂಜುನಾಥ್ ತಿಳಿಸಿದರು.

ಶಿರಾ: ಒಳಮೀಸಲಾತಿ ಬಗ್ಗೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿರುವುದರಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಮಂಜುನಾಥ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಸ್‌ಪಿ ರಾಷ್ಟ್ರೀಯ ನಾಯಕಿ ಮಾಯವತಿ ಒಳಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಆ.1 ರಂದು ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಬಲವಾಗಿ ವಿರೋಧಿಸಿದ್ದಾರೆ. ಮೀಸಲಾತಿಯನ್ನು ಒಂದು ಪೀಳಿಗೆಗೆ ಮಾತ್ರ ನಿಯಂತ್ರಿಸುವುದು ಮತ್ತು ಕೆನೆಪದರ ವಿಷಯಗಳನ್ನು ವಿರೋಧಿಸಿರುವ ಮಾಯವತಿ ನಿಲುವನ್ನು ನಾವು ವಿರೋಧಿಸುತ್ತೇವೆ ಎಂದರು..

ಆದರೆ ಒಳಮೀಸಲಾತಿ ವಿರೋಧಿಸುವ ಅವರ ತೀರ್ಮಾನದ ಬಗ್ಗೆ ಕರ್ನಾಟಕ ಬಿಎಸ್‌ಪಿ ನಾಯಕರು ಬಿನ್ನಾಭಿಪ್ರಾಯ ಹೊಂದಿದ್ದು, ಕಳೆದ 30 ವರ್ಷಗಳ ಒಳಮೀಸಲಾತಿ ಆಂದೋಲನವನ್ನು ಬಿಎಸ್‌ಪಿ ನಾಯಕರು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರೇ ವಿರೋಧ ವ್ಯಕ್ತಪಡಿಸಿರುವುದರಿಂದ ತುಮಕೂರು ಜಿಲ್ಲೆಯ ಬಿಎಸ್‌ಪಿಯ ವಿವಿಧ ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಬೆಲ್ಲದಮಡು ಭರತ್‌ಕುಮಾರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಿಎಸ್‌ಪಿ ಮಾನ್ಯವಾರ್ ಕಾನ್ಷೀರಾಂ ಅವರ ಸಿದ್ಧಾಂತದಿಂದ ಸಂಪೂರ್ಣವಾಗಿ ದೂರ ಸರಿದಿದೆ. ಅಲ್ಲದೆ ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಬಹುಜನ ಸಮಾಜದಲ್ಲಿ ಇದುವರೆಗೂ ಸಮುದಾಯಗಳ ಅಳಲು ಕೇಳುತ್ತಿಲ್ಲ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಮಹಾತ್ಮ ಫುಲೆ, ಶಾಹು ಮಹರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ನಾರಾಯಣ ಗುರು, ಬಾಬಾ ಸಾಹೇಬ್ ಅಂಬೇಡ್ಕರ್, ಮಾನ್ಯವಾರ್ ಕಾನ್ಷೀರಾಂ ಅವರ ಆದೇಶಗಳ ಮೇಲೆ ಬಹುಜನ ಚಳುವಳಿ ಮುಂದುವರೆಸುತ್ತೇವೆ ಎಂದರು.

ಬಿಎಸ್‌ಪಿ ತಾಲೂಕು ಅಧ್ಯಕ್ಷ ವೀರಕ್ಯಾತಯ್ಯ, ನಾಗೇಂದ್ರ, ತುಮಕೂರು ತಾಲೂಕು ಅಧ್ಯಕ್ಷ ದಿನೇಶ್ ಬಾಬು, ಗ್ರಾಮಾಂತರ ಉಸ್ತುವಾರಿ ಎನ್.ಕುಮಾರ್, ತಾಲೂಕು ಕಾರ್ಯದರ್ಶಿ ರಮೇಶ್ ಹಾಜರಿದ್ದರು.