ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಾಡಿನಲ್ಲಿ ಗುರು-ವಿರಕ್ತ ಎಂಬ ಪರಂಪರೆ ಇದ್ದು, ಸಮಾಜ ಉದ್ದಾರ ಮಾಡುವ ಕೆಲಸವನ್ನು ಎರಡು ಪೀಠದ ಮಠಾಧೀಶರು ಮಾಡುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರುವುದು ವಿಷಾದಕರ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಕಣಕಾಲ ಗ್ರಾಮದ ಮಡಿವಾಳೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಮಂಗಲೋತ್ಸವದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಗುರು ಪರಂಪರೆ, ವಿರಕ್ತ ಪರಂಪರೆಗಳು ಮಹಾತ್ಮರ ಸಂದೇಶಗಳನ್ನು ಸಮಾಜಕ್ಕೆ ಮುಟ್ಟಿಸಿ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕಾರ್ಯಮಾಡುತ್ತಿವೆ. ಅಣ್ಣ ಬಸವಣ್ಣನವರು ಜಾತಿಯ ವಿಷಬೀಜವನ್ನು ಕಿತ್ತೆಸೆಯಲು ಹೋರಾಟ ಮಾಡಿದರು. ಅವರ ತತ್ವಗಳನ್ನು ಬೋಧನೆ ಹಾಗೂ ಭಾವಚಿತ್ರ ಪೂಜೆ ಮಾಡುವ ಜೊತೆಗೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಬಸವಣ್ಣನವರ ಭಕ್ತನಾಗಲು ಸಾಧ್ಯ ಎಂದರು.
ಬಸವಣ್ಣನವರು ೧೨ನೇ ಶತಮಾತನದಲ್ಲಿ ಎಲ್ಲ ಶರಣರೊಂದಿಗೆ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಜಾತಿಯತೆ ಹೋಗಲಾಡಿಸಲು ಪ್ರಯತ್ನಿಸಿದರು. ಅವರಂತೆ ನಾವು ಕೂಡ ಜಾತೀಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿ ಎಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿದಾಗ ಮಾತ್ರ ಬಸವಣ್ಣನವರ ನಿಜವಾದ ಆದರ್ಶ ಅನುಸರಿಸಿದಂತೆ ಎಂದು ತಿಳಿಹೇಳಿದರು.ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಇಂದು ಬಹುತೇಕರು ಶ್ರೀಮಂತರಾಗಿದ್ದಾರೆ. ಆದರೆ ಅವರಿಗೆ ನೆಮ್ಮದಿ ಬದುಕಿಗಾಗಿ ಮಠಗಳ ಆಶ್ರಯ ಅವಶ್ಯಕವಾಗಿದೆ. ಭಾರತದ ಸಂಸ್ಕಾರವನ್ನು ಪಂಚಪೀಠಗಳ ಕಾಪಾಡಿಕೊಂಡು ಬಂದಿವೆ. ಗುರುವಿನ ಶಕ್ತಿ ಬಗ್ಗೆ ಅರಿತು ನಡೆದಾಗ ಗೊತ್ತಾಗುತ್ತದೆ ಅವರ ಬಳಿ ಎಂತಹ ಶಕ್ತಿಯಿದೆ ಎನ್ನುವುದು. ಪ್ರತಿಯೊಬ್ಬರು ನೆಮ್ಮದಿಯ ಬದುಕು ನಡೆಸಬೇಕಾದರೆ ಪುರಾಣ, ಪ್ರವಚನಗಳನ್ನು ಆಲಿಸಿ ಅದರಂತೆ ಬದುಕಿದಾಗ ನೆಮ್ಮದಿ ಬದುಕು ದೊರಕಲು ಸಾಧ್ಯವಾಗುತ್ತದೆ ಎಂದರು.
ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕರಿಭಂಟನಾಳದ ಶಿವಕುಮಾರ ಸ್ವಾಮಿಜಿ, ದೇವರಹಿಪ್ಪರಗಿಯ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಢವಳಗಿಯ ಘನಮಠೇಶ್ವರ ಸ್ವಾಮೀಜಿ ಮಾತನಾಡಿದರು.ಕಣಕಾಲ ಗ್ರಾಪಂ ಅಧ್ಯಕ್ಷೆ ಶರಣಮ್ಮ ಕುಂಬಾರ, ಉಪಾಧ್ಯಕ್ಷ ಸಂಗಪ್ಪ ಸಜ್ಜನ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಜಿ.ಕೆ.ದಿನ್ನಿ, ಬಸಲಿಂಗಪ್ಪ ಕುಂಬಾರ, ಶಿವಾನಂದ ಹುಲ್ಲೂರ, ಕಾಶೀನಾಥ ಸಜ್ಜನ, ರಾಜಶೇಖರ ಹುಲ್ಲೂರ, ಮಹಾಂತಯ್ಯ ಮಠಪತಿ ಸೇರಿ ಮುಂತಾದವರು ಇದ್ದರು. ಸಂಗಮೇಶ ಹಳ್ಳೂರ ನಿರೂಪಿಸಿ, ವಂದಿಸಿದರು.
ಜಗದ್ಗುರುಗಳ ಅಡ್ಡಪಲ್ಕಕ್ಕಿ:ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯರ ಅಡ್ಡಪಲಕ್ಕಿ ಮಹೋತ್ಸವ ಬ್ಯಾಲ್ಯಾಳ ಕ್ರಾಸ್‌ನಿಂದ ಕುಂಭಮೇಳ ವಿವಿಧ ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳ ಮೂಲಕವಾಗಿ ಕಣಕಾಲ ಮಡಿವಾಳೇಶ್ವರ ಮಠಕ್ಕೆ ಆಗಮಿಸಿತು. ಅಡ್ಡಪಲ್ಲಕ್ಕಿಗೆ ಗ್ರಾಮಸ್ಥರು ಮಾರ್ಗದಲ್ಲಿ ರಂಗೋಲಿ ಹಾಕಿ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿದರು.
ಪೋಟೋ:ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಮಂಗಳವಾರ ಜರುಗಿದ ಧರ್ಮಸಭೆ ಸಾನಿಧ್ಯ ವಹಿಸಿದ್ದ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಾಯ ಶಿವಾಚಾರ್ಯರು ಮಾತನಾಡಿದರು.ಕೋಟ್
ಮಠಗಳಿಗೂ ರಾಜಾಶ್ರಯ ಬೇಕು. ಹಾಗೆಯೇ ಶಾಸಕರಿಗೂ ಮಠಗಳ ಆಶ್ರಯ ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ. ಇವರಿಬ್ಬರೂ ಸಮನ್ವಯತೆ ಇದ್ದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ಕೇವಲ ಭಾಷಣ ಮಾಡಿ ಜಾತಿಯ ವಿಷಬೀಜ ಬಿತ್ತುವ ಕಾರ್ಯವಾದರೆ ಅದು ಬಸವಣ್ಣನವರ ತತ್ವಕ್ಕೆ ವಿರುದ್ಧವಲ್ಲವೇ.ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶ್ರೀ, ಶ್ರೀಶೈಲ ಪೀಠ