ಸಚಿವರ ಕಾರಿಗೆ ಅಡ್ಡಿ ಸರಿಯಲ್ಲ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

| Published : Jul 06 2025, 01:48 AM IST

ಸಚಿವರ ಕಾರಿಗೆ ಅಡ್ಡಿ ಸರಿಯಲ್ಲ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿಯೇ ಅಂಬಿಗರ ಚೌಡಯ್ಯನವರ ಗುರುಪೀಠ ಇರುವುದು ಇದೊಂದೆ. ಈ ಪೀಠದ ಮುಂದಾಳತ್ವದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಜರುಗಬೇಕಿದೆ.

ಹಾವೇರಿ: ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಅಂಬಿಗರ ಚೌಡಯ್ಯನವರ ಐಕ್ಯಮಂಟಪ ವೀಕ್ಷಣೆಗೆ ತೆರಳುವಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಚಿವರಿಗೆ, ಶ್ರೀಗಳಿಗೆ ತಡೆಯೊಡ್ಡಿರುವುದು ಬಹಳ ನೋವುಂಟು ಮಾಡಿದೆ. ಈ ಬೆಳವಣಿಗೆ ಖೇದಕರವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲ ಅವರು ಜು. 4ರಂದು ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಹಲವು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಚೌಡಯ್ಯದಾನಪುರದ ಚಂದ್ರಶೇಖರ ಮಠಕ್ಕೆ ಮೊದಲು ಭೇಟಿ ಮಾಡಿದ್ದ ಸಚಿವರು, ನಂತರ ನರಸೀಪುರದ ಅಂಬಿಗರ ಚೌಡಯ್ಯನವರ ಪೀಠಕ್ಕೆ ಬಂದು ಸ್ವಾಮೀಜಿಗಳ ಜತೆಗೆ ಚರ್ಚೆ ನಡೆಸಿದ್ದರು.

ಶ್ರೀಗಳ ನೇತೃತ್ವದಲ್ಲಿ ಹಾಗೂ ಗುರುಪೀಠದ ಮುಂದಾಳತ್ವದಲ್ಲಿ ಚೌಡಯ್ಯನವರ ಐಕ್ಯಮಂಟಪ, ಗದ್ದುಗೆ ಅಭಿವೃದ್ಧಿ ಮಾಡುವಂತೆ ತಿಳಿಸಲಾಗಿದೆ. ಈ ವೇಳೆ ಸಚಿವರು, ಶಾಸಕರು ಶ್ರೀಗಳ ಜತೆಗೆ ಚೌಡಯ್ಯದಾನಪುರದ ಐಕ್ಯಮಂಟಪ ವೀಕ್ಷಣೆಗೆ ಹೊರಟಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಘೇರಾವ್ ಹಾಕಿ ವೀಕ್ಷಣೆಗೆ ಅವಕಾಶ ನೀಡದಿರುವುದು ಖೇದಕರ ಸಂಗತಿಯಾಗಿದ್ದು, ಪೀಠಕ್ಕೆ ಮಾಡಿದ ಅವಮಾನವಾಗಿದೆ. ಈ ಬೆಳವಣಿಗೆ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ರಾಜ್ಯದಲ್ಲಿಯೇ ಅಂಬಿಗರ ಚೌಡಯ್ಯನವರ ಗುರುಪೀಠ ಇರುವುದು ಇದೊಂದೆ. ಈ ಪೀಠದ ಮುಂದಾಳತ್ವದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಜರುಗಬೇಕಿದೆ. ದೇವಸ್ಥಾನ ಅಭಿವೃದ್ಧಿ, ಪೂಜೆ ಕಾರ್ಯಕ್ಕೆ ಅಡ್ಡಿ ಬರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಗದ್ದುಗೆ ಅಭಿವೃದ್ಧಿ ವಿಚಾರಕ್ಕೆ ಯಾರೇ ಅಡ್ಡಿ ಬಂದರೂ ರಾಜ್ಯಾದ್ಯಂತ ಸಮಾಜದವರಿಗೆ ಜಾಗೃತಿ ಮೂಡಿಸಿ, ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ಪ್ರತಿ ಬಾರಿಯೂ ಗದ್ದುಗೆ ಅಭಿವೃದ್ಧಿ ಪಡಿಸಲು ಹೋದಾಗ ವಿರೋಧ ಮಾಡುತ್ತಲೇ ಇದ್ದಾರೆ. ಈ ವಿಚಾರದಲ್ಲಿ ಯಾವುದೇ ಬಣ, ಪಂಗಡ ಇಲ್ಲ. ಸಮಾಜದ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಚಂದ್ರಪ್ಪ ಜಾಲಗಾರ, ಪ್ರವೀಣ ವಡ್ನಿಕೊಪ್ಪ, ಮಂಜುನಾಥ ಪುಟಗನಾಳ, ಎಚ್.ಐ ದಂಡಿನ, ಶಂಕರ ಸುತಾರ, ಬಸವರಾಜ ಕಳಸೂರ, ಭಾಸ್ಕರ ಹುಲ್ಮನಿ, ಕರಬಸಪ್ಪ ಹಳದೂರ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಭಿನ್ನಾಭಿಪ್ರಾಯ ಇಲ್ಲ: ಸ್ವಾಮೀಜಿ

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಗಾಗಿ ₹32 ಕೋಟಿ ಅನುದಾನ ಬಂದಿತ್ತು. ಆದರೆ ದೇವಸ್ಥಾನ ಪುರಾತತ್ವ(ಪ್ರಾಚ್ಯ) ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಕಾನೂನು ತೊಡಕುಗಳು ಬಗೆಹರಿಯುವ ತನಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತಲೇ ಇದೆ. ಹಾಗಾಗಿ ಸಮಾಜದಲ್ಲಿನ ಒಡಕು ಸರಿಪಡಿಸಿಕೊಂಡಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರಿಗೂ ಐಕ್ಯಮಂಟಪ ಬೇಕಾಗಿದ್ದು, ಮನವೊಲಿಕೆ ಕಾರ್ಯ ಅಗತ್ಯವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅತಿ ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ತಿಳಿಸಿದರು.