ಚಿಕ್ಕಮಗಳೂರು ಸ್ವಚ್ಛ ಮತ್ತು ಸುಂದರ ಪರಿಸರ ಹಿರಿಯರಿಂದ ನಮಗೆ ಬಂದಿರುವ ಬಳುವಳಿ, ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು.
- ರೋಟರಿ ಕಾಫಿ ಲ್ಯಾಂಡ್ ಅಭಿವೃದ್ಧಿಪಡಿಸಿರುವ ಮಹಾತ್ಮಾಗಾಂಧಿ ಉದ್ಯಾನವನ ಲೋಕಾರ್ಪಣೆ ಕಾರ್ಯಕ್ರಮ
---- ಪರಿಸರಕ್ಕೆ ನಾವು ಕೃತಜ್ಞರಾಗಿರಬೇಕು.- ಪರಿಸರ ಉಚಿತವಾಗಿ ಶುದ್ಧವಾದ ಆಮ್ಲಜನಕ ನೀಡುತ್ತಿದೆ - ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳೆಸಲು ಮುಂದಾಗಬೇಕು
- ರೋಟರಿ ಕಾಫಿ ಲ್ಯಾಂಡ್ ಸಂಘ ಸಂಸ್ಥೆಗಳಿಗೆ ಮಾದರಿ-
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸ್ವಚ್ಛ ಮತ್ತು ಸುಂದರ ಪರಿಸರ ಹಿರಿಯರಿಂದ ನಮಗೆ ಬಂದಿರುವ ಬಳುವಳಿ, ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು.
ರೋಟರಿ ಕಾಫಿ ಲ್ಯಾಂಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಜಿಲ್ಲಾ ನ್ಯಾಯಾಲಯ ಮುಂಭಾಗದ ಮಹಾತ್ಮಾಗಾಂಧಿ ಉದ್ಯಾನ ವನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು. ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ, ಗಿಡ, ಮರ, ಶುದ್ಧವಾದ ಗಾಳಿ, ನೀರು ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲ ಎಂದ ಅವರು ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಸಿಗದೇ ಅನೇಕರು ಸಾವನ್ನಪ್ಪಿದರು. ಆದರೆ, ಪರಿಸರ ನಮಗೆ ಶುದ್ಧವಾದ ಆಮ್ಲಜನಕವನ್ನು ಉಚಿತವಾಗಿ ನೀಡುತ್ತಿದೆ. ಹಾಗಾಗಿ ಪರಿಸರಕ್ಕೆ ನಾವು ಕೃತಜ್ಞರಾಗಿರಬೇಕು. ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉದ್ಯಾನವನ್ನು ಅಭಿವೃದ್ಧಿಪಡಿಸಿರುವ ರೋಟರಿ ಕಾಫಿ ಲ್ಯಾಂಡ್ ಸಂಸ್ಥೆ ಕಾರ್ಯ ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.ನಗರದ ಹೃದಯ ಭಾಗದಲ್ಲಿರುವ ಈ ಉದ್ಯಾನವನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದಲ್ಲಿ ಇನ್ನೂರಕ್ಕೂ ಹೆಚ್ಚು ನಗರಸಭೆ ಉದ್ಯಾನವನಗಳಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಲು ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ನೀಡಲಾಗುವುದು ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ನಿರ್ದೇಶಕ ಬಿ.ಕೆ. ಗುರುಮೂರ್ತಿ, ರೋಟರಿ ಕಾಫಿ ಲ್ಯಾಂಡ್ ಗೆ 25 ವರ್ಷಗಳು ತುಂಬಿದ್ದು ಅದರ ಸ್ಮರಣೆಗಾಗಿ ಮಹಾತ್ಮ ಗಾಂಧಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದ್ದು ಸದ್ಯದಲ್ಲೇ ನಗರದಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಗುವುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ, ಉದ್ಯಾನವನದ ಅಭಿವೃದ್ಧಿಗೆ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ರೋಟರಿ ಜಿಲ್ಲಾ ರಾಜ್ಯಪಾಲ ಕೆ. ಪಾಲಾಕ್ಷ ಉದ್ಯಾನವನದ ನಾಮಫಲಕ ಅನಾವರಣಗೊಳಿಸಿದರು. ಉದ್ಯಾನವನದಲ್ಲಿ ಗಣ್ಯರಿಂದ ಗಿಡಗಳನ್ನು ನೆಡಲಾಯಿತು.ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಟಿ.ಎಂ. ಪ್ರವೀಣ್ ನಾಹರ್, ವಲಯ ಸೇನಾನಿ ಎಚ್.ಕೆ. ಮಂಜುನಾಥ್, ರೋಟರಿ ಕಾಫಿ ಲ್ಯಾಂಡ್ ಕಾರ್ಯದರ್ಶಿ ಎಂ.ಆನಂದ್, ನಗರಸಭೆ ಸದಸ್ಯೆ ಸುಜಾತಾ ಶಿವಕುಮಾರ್, ಜಯದೇವ್, ರೋಟರಿ ಅಧ್ಯಕ್ಷ ನಂಜುಂಡಸ್ವಾಮಿ ಉಪಸ್ಥಿತರಿದ್ದರು.15 ಕೆಸಿಕೆಎಂ 1ಜಿಲ್ಲಾ ನ್ಯಾಯಾಲಯ ಮುಂಭಾಗದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ನಿರ್ಮಾಣ ಮಾಡಲಾಗಿರುವ ಧ್ಯಾನ ಮಂದಿರವನ್ನು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಉದ್ಘಾಟಿಸಿದರು.