ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ. ಹಾಗಾಗಿ ಅಮ್ಮನನ್ನು ಗೌರವಿಸುವುದರಿಂದ ಪುಣ್ಯ ಸಿಗುತ್ತದೆ ಎಂದು ಯೋಗ ಗುರು ವಸಂತ ನಾರಾಯಣಗೌಡ ಹೇಳಿದರು.ನಗರದ ಭೈರವೇಶ್ವರ ಬ್ಯಾಂಕಿನ ಶ್ರೀಭರವೇಶ್ವರ ಸಭಾಂಗಣದಲ್ಲಿ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಅಮ್ಮಂದಿರ ದಿನ, ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒಂದು ಸ್ವಾಸ್ಥ ಸಮಾಜ ನಿರ್ಮಾಣದ ಹಿಂದೆ ಅಮ್ಮಂದಿರ ಶ್ರಮವಿದೆ. ಮಕ್ಕಳ ಬೇಕು, ಬೇಡಗಳನ್ನು ಅರಿತು ನಿಭಾಯಿಸುವ ಮೂಲಕ ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ಕೆಲಸ ಮಾಡುತ್ತಾಳೆ ಎಂದರು.ಮಕ್ಕಳನ್ನು ಸಚ್ಚಾರಿತ್ರವಂತರಾಗಿ ಬೆಳೆಸಲು ತಾಯಂದಿರು ಹೆಚ್ಚಿನ ಗಮನ ನೀಡಬೇಕು. ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ, ಅವರಿಗೆ ಬೇಕಾದದನ್ನು ಕೊಡಿಸಿದರೆ ನಮ್ಮ ಜವಾಬ್ದಾರಿ ಮುಗಿಯಲ್ಲ. ಅವರ ಶೈಕ್ಷಣಿಕ ಬೆಳವಣಿಗೆ ಜೊತೆಗೆ ಅವರ ಸ್ನೇಹಿತರ ವಲಯ, ಶಾಲಾ ನಂತರದಲ್ಲಿ ಅವರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ತುಮಕೂರು ಜಿಲ್ಲಾಧ್ಯಕ್ಷೆ ಸುಜಾತ ನಂಜೇಗೌಡ ಮಾತನಾಡಿ, ಹೆಣ್ಣು ತಾಯಿ, ಮಡದಿ, ಅಕ್ಕ, ತಂಗಿ, ಮಗಳಾಗಿ ಒಂದು ಗಂಡಿನ ಸರ್ವತೋಮುಖ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಒಂದು ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯದ ಜೀವನಕ್ಕೆ ಸಿಮೀತವಾಗಿದ್ದ ತಾಯಂದಿರಿಗೆ ಇಂದು ವಿಫುಲ ಅವಕಾಶಗಳಿವೆ. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಹಲವಾರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ ಎಂದರು.ಗಂಡಿಗೆ ಸರಿಸಮನಾಗಿ ಎಲ್ಲಾ ರಂಗದಲ್ಲಿಯೂ ತಮ್ಮ ಸಾಧನೆಯ ಚಾಪು ಮೂಡಿಸಿದ್ದಾರೆ. ಆದರೆ ಮಕ್ಕಳ ಮೇಲಿನ ಅತಿಯಾದ ಪ್ರೀತಿ ಕೆಲವೊಮ್ಮೆ ಆಕೆಗೆ ಮುಳುವಾಗುತ್ತಿರುವುದನ್ನು ಇತ್ತೀಚಿನ ಪ್ರಕರಣಗಳಲ್ಲಿ ನಾವು ಕಾಣಬಹುದಾಗಿದೆ ಎಂದು ಹೇಳಿದರು.ಆದಿಚುಂಚನಗಿರಿ ಮಠದ ವತಿಯಿಂದ 2022 ರಲ್ಲಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ನಿರ್ಮಿಸಿ, ರಾಜ್ಯದ ಎಲ್ಲಾ ತಾಲೂಕುಗಳಿಂದಲೂ ತಲಾ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಳಾಗಿದೆ. ತುಮಕೂರಿನಿಂದ ಸುಜಾತ ನಂಜೇಗೌಡ ಮತ್ತು ಯಶೋಧಮ್ಮ ವೀರಯ್ಯ ಅವರನ್ನು ನೇಮಕ ಮಾಡಿದ್ದು, ನಾವುಗಳು ಜಿಲ್ಲೆಯ 10 ತಾಲೂಕುಗಳಿಂದ ತಲಾ ಇಬ್ಬರು ನಿರ್ದೇಶಕರನ್ನು ನೇಮಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದೇವೆ. ಮಠದ ವತಿಯಿಂದ ನೀಡುವ ಎಲ್ಲಾ ಕಾರ್ಯಕ್ರಮಗಳನ್ನು ಚಾಚು ತಪ್ಪದೆ ನಿರ್ವಹಿಸಲಾಗುವುದು ಎಂದರು.ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ವತಿಯಿಂದ ಐದು ಜನ ಹಿರಿಯ ತಾಯಂದಿರಿಗೆ ಗೌರವ ಸಮರ್ಪಣೆ ಮಾಡಲಾಯಿತು. ವೇದಿಕೆಯಲ್ಲಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ತುಮಕೂರು ಜಿಲ್ಲಾ ಉಪಾಧ್ಯಕ್ಷ ಯಶೋಧಮ್ಮ ವೀರಯ್ಯ,ಕಾರ್ಯದರ್ಶಿ ರೇಖಾ ಅನೂಪ್, ಖಜಾಂಚಿ ಜ್ಞಾನ್ಹವಿ, ಜಂಟಿ ಕಾರ್ಯದರ್ಶಿ ಅನಸೂಯ, ನಿರ್ದೇಶಕ ನವ್ಯ ಪ್ರಕಾಶ್, ಸುನಂದ, ಪಾವರ್ತಿ ಪಾಲ್ಗೊಂಡಿದ್ದರು.