ಸಿದ್ದಾಪುರ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಡೊಳ್ಳು ಕುಣಿತ ಸ್ಪರ್ಧೆಯನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದ ಭೀಮಣ್ಣ ನಾಯ್ಕ ಮಾತನಾಡಿ, ಜನಪದ ಕಲೆಗಳು ಈ ನಾಡಿನ ಶ್ರೀಮಂತಿಕೆಯ ಸಂಕೇತವಾಗಿವೆ. ನನ್ನ ರಾಜಕೀಯ ಗುರುಗಳಾಗಿದ್ದ ಎಸ್. ಬಂಗಾರಪ್ಪ ಡೊಳ್ಳು ಕುಣಿತದಲ್ಲಿ ಹೆಸರುವಾಸಿಯಾಗಿದ್ದರು. ಅವರ ಮೆಚ್ಚಿನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಸಿದ್ದಾಪುರದ ಅಭಿಮಾನಿ ಬಳಗದ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಜನಪದ ಕಲೆಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಂಗಾರಪ್ಪ ಅವರ ಹೆಸರಲ್ಲಿ ಈ ನಾಡಿನ ರೈತಾಪಿ ಸಮುದಾಯ ಹೊಲಗಳಿಗೆ ನೀರುಣಿಸುತ್ತಿದೆ. ಅವರ ಜನಪರ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ, ನಿಜವಾದ ಬಡವರ ಬಂಧುವಾಗಿದ್ದ ಬಂಗಾರಪ್ಪ ಸ್ವತಃ ಡೊಳ್ಳು ಕಟ್ಟಿ ಕುಣಿಯುತ್ತಿದ್ದರು. ಡೊಳ್ಳು ಹಾಗೂ ಇತರ ಜಾನಪದ ಕಲೆಯನ್ನು ಜೀವಂತವಾಗಿರಿಸಲು ಯುವಜನತೆ ಮುಂದಾಗಬೇಕು ಎಂದರು.
ಸಾರಂಗನಜಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಸನ್ಮಾನಿತರಾದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಜಿಪಂ ಮಾಜಿ ಸದಸ್ಯ ವಿ.ಎನ್. ನಾಯ್ಕ, ತಾಪಂ ಮಾಜಿ ಅಧ್ಯಕ್ಷ ಸಿ.ಆರ್. ನಾಯ್ಕ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ ಹಸ್ವಿಗುಳಿ, ಉದ್ಯಮಿ ಉಪೇಂದ್ರ ಪೈ, ಬಂಗಾರಪ್ಪ ಅಪ್ಪಟ ಅಭಿಮಾನಿ ನಾಸೀರ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.ಡೊಳ್ಳು ಕುಣಿತ ಸಮಿತಿ ಅಧ್ಯಕ್ಷ ಹೇಮಂತ ನಾಯ್ಕ ಗೋಳಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ರವಿಕುಮಾರ ಕೊಠಾರಿ ಸ್ವಾಗತಿಸಿದರು.
ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಹಿರಿಯ ವೈದ್ಯ ಡಾ. ಎಸ್.ಆರ್. ಹೆಗಡೆ, ಖ್ಯಾತ ಚಂಡೇವಾದಕ ಧನಂಜಯ ನಾಯ್ಕ ಪುರದಮಠ, ಯಕ್ಷಗಾನ ಕಲಾವಿದ ರಮೇಶ ಗೌಡ ಮುಸವಳ್ಳಿ, ಸಂಗೀತ ಕಲಾವಿದರಾದ ಗೋಪಾಲ ಕಾನಳ್ಳಿ, ವೆಂಕಟೇಶ ಕೊಂಡ್ಲಿ, ಅಸ್ಲಾಂ ಶೇಖ್ ಅವರನ್ನು ಬಂಗಾರಪ್ಪ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಸಾಗರ ತಾಲೂಕಿನ ಹೊಸಕೊಪ್ಪ ಪ್ರಥಮ, ಸಿದ್ದಾಪುರ ತಾಲೂಕಿನ ಕೊಡಗಿಬೈಲ್ ದ್ವಿತೀಯ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರಡಿಗುಡ್ಡ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.