ಗೋಸಂರಕ್ಷಣೆ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಮಟಾ

ಗೋವು ಕೇವಲ ಸಾಕುಪ್ರಾಣಿಯಾಗದೇ ನಮ್ಮೆಲ್ಲರ ತಾಯಿಯಾಗಿ ದೇವತೆಯಾಗಿ ಕಾಣುವಷ್ಟು ಪೂಜ್ಯತೆ ಪಡೆದಿದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಗೋಮಾತೆಗೆ ಶ್ರೇಷ್ಠ ಸ್ಥಾನವಿದೆ. ಇಂತಹ ಪರೋಪಕಾರಿ ಗೋಮಾತೆಯನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದ್ದು ಎಂದು ಶಿರಸಿಯ ಶ್ರೀಕೃಷ್ಣ ಭಾರತೀಯ ಗೋತಳಿ ಸಂರಕ್ಷಣಾ ಕೇಂದ್ರದ ಕಾರ್ಯದರ್ಶಿ ಕರುಣಾಕರ ನಾಯ್ಕ ಹೇಳಿದರು.

ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಯೂನಿಯನ್ ವಿಭಾಗದಿಂದ ಹಮ್ಮಿಕೊಂಡಿದ್ದ ಗೋಸಂರಕ್ಷಣೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೋವಿನ ಪರಿಶುದ್ಧ ಹಾಲು ಹಾಗೂ ಇತರ ಉತ್ಪನ್ನಗಳು ದೈಹಿಕ-ಮಾನಸಿಕ ಆರೋಗ್ಯ ವೃದ್ಧಿಸಿ ನಿರೋಗಿಯಾಗಿಸುತ್ತದೆ. ಆಧುನಿಕ ಕೃಷಿ ಪದ್ಧತಿ, ಜಾಗತೀಕರಣದ ಪ್ರಭಾವದಿಂದ ಕೃಷಿಯಲ್ಲಿ ತಂತ್ರಜ್ಞಾನಗಳು ಹೆಚ್ಚಾಗಿ ಗೋಸಾಕಾಣಿಕೆ ಕಡಿಮೆಯಾಗಿದೆ. ದೇಸಿ ಗೋವುಗಳ ಸಾಕಾಣಿಕೆಯಿಂದ ಹಲವಾರು ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ಪ್ರಯೋಜನಗಳಿದ್ದು ಯುವಜನತೆ ಅದನ್ನೆಲ್ಲಾ ಅರಿಯಬೇಕು. ದೇಸೀ ಗೋತಳಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕು. ಇದು ನಮ್ಮ ಸನಾತನ ಸಂಸ್ಕೃತಿಗೆ ನಾವು ನೀಡುವ ಕೊಡುಗೆಯಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್.ಡಿ. ನಾಯ್ಕ ಮಾತನಾಡಿ, ಗೋವುಗಳ ಸಂರಕ್ಷಣೆ ಹಾಗೂ ಸಾಕಾಣಿಕೆ ಆರ್ಥಿಕ ಅಭಿವೃದ್ಧಿಗೂ ಬಹುಮುಖ್ಯ. ಗೋಸಾಕಾಣಿಕೆ ಪ್ರಮುಖ ಲಾಭದಾಯಕ ಉದ್ಯೋಗಗಳಲ್ಲಿ ಒಂದು. ಯುವ ಜನತೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಹೈನೋದ್ಯಮವೂ ಶ್ರೇಷ್ಠ ವೃತ್ತಿಯಾಗಿದೆ. ವಿದ್ಯಾರ್ಥಿಗಳು ದುಷ್ಟ ಶಕ್ತಿಗಳ ಕುರಿತು ಜಾಗ್ರತರಾಗಿದ್ದು ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.

ಯೂನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ, ಪ್ರೊ. ಸಂತೋಷ ಶಾನಭಾಗ, ವಿದ್ಯಾರ್ಥಿ ಯೂನಿಯನ್ ಕಾರ್ಯದರ್ಶಿಗಳಾದ ವಿಕಾಸ ನಾಯ್ಕ, ದೀಪಾ ಪೈ ವೇದಿಕೆಯಲ್ಲಿದ್ದರು. ಡಾ ಮಂಜುನಾಥ ವೆರ್ಣೇಕರ ಸ್ವಾಗತಿಸಿ ನಿರ್ವಹಿಸಿದರು.