ಜಿಲ್ಲೆ ಪಾಲಿನ ನೀರು ಪಡೆಯುವುದು ನಮ್ಮ ಹಕ್ಕು

| Published : Jun 25 2024, 12:39 AM IST

ಸಾರಾಂಶ

ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ನಿರ್ಮಿಸುತ್ತಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿರುವ ಬಂದ್‌ಗೆ ತಾಲುಕು ವಕೀಲರ ಸಂಘವು ಸಂಪೂರ್ಣ ಬೆಂಬಲ ಇದೆ ಎಂದು ಸಂಘದ ಅಧ್ಯಕ್ಷ ಬಿ ಕೆ ಚಿದಾನಂದ ಮೂರ್ತಿ ತಿಳಿಸಿದರು.

ಗುಬ್ಬಿ: ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ನಿರ್ಮಿಸುತ್ತಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿರುವ ಬಂದ್‌ಗೆ ತಾಲುಕು ವಕೀಲರ ಸಂಘವು ಸಂಪೂರ್ಣ ಬೆಂಬಲ ಇದೆ ಎಂದು ಸಂಘದ ಅಧ್ಯಕ್ಷ ಬಿ ಕೆ ಚಿದಾನಂದ ಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಪಾಲಿನ ನೀರನ್ನು ಪಡೆಯುವುದು ನಮ್ಮ ಹಕ್ಕಾಗಿದೆ. ಯಾವುದೇ ಹೋರಾಟ ಮಾಡಿಯಾದರೂ ನೀರನ್ನು ಪಡೆದೇ ತೀರುತ್ತೇವೆ. ಹೋರಾಟಗಾರರ ಬೆಂಬಲಕ್ಕೆ ನಾವುಗಳು ನಿಲ್ಲುತ್ತೇವೆ. ವಕೀಲರೂ ಮೂಲತಃ ಕೃಷಿಕರೇ ಆಗಿದ್ದು, ಹೇಮಾವತಿ ನೀರಿನ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಬಂದ್ ನಲ್ಲಿ ಭಾಗವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಕ್ಸ್ ಪ್ರೆಸ್ ಕೆನಾಲ್‌ನಲ್ಲಿ ನೀರು ತೆಗೆದುಕೊಂಡು ಹೋದಲ್ಲಿ ತಾಲುಕಿಗೆ ತುಂಬಲಾರದ ನಷ್ಟವಾಗುವುದು. ರೈತರು ಸಂಕಷ್ಟಕ್ಕೆ ಒಳಗಾಗುವ ಜೊತೆಗೆ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ. ಪ್ರತಿಭಟನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸುವ ಹೋರಾಟಗಾರರ ಮೇಲೆ ಸರ್ಕಾರ ಕಾನೂನಿಗೆ ವಿರುದ್ಧವಾಗಿ ಯಾವುದೇ ಕೇಸ್‌ ದಾಖಲಿಸಿದಲ್ಲಿ ವಕೀಲರು ಹೋರಾಟಗಾರರ ಪರ ನಿಂತು ನ್ಯಾಯಾಲಯದಲ್ಲಿ ಹೋರಾಟ ನಡೆಸುವೆವು. ವಕೀಲರ ಜೊತೆಗೆ ಕಕ್ಷಿದಾರರು ಈ ಬಂದ್ ನಲ್ಲಿ ಭಾಗಿಯಾಗುವಂತೆ ತಿಳಿಸಿದ್ದೇವೆ. ಪಕ್ಷಾತೀತವಾಗಿ ನಡೆಯುತ್ತಿರುವ ಈ ಬಂದ್‌ಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ವಕೀಲರ ಸಂಘದ ಜಂಟಿಕಾರ್ಯದರ್ಶಿ ನಂದೀಶ್, ಪದಾಧಿಕಾರಿ ರಂಗಸ್ವಾಮಿ ಹಾಗೂ ಅನೇಕ ವಕೀಲರು ಭಾಗವಹಿಸಿದ್ದರು.