ಅಭ್ಯಾಸದ ಪ್ರೀತಿ ಇಲ್ಲದವನು ಯಾವತ್ತು ಸಾಧಕನಾಗಲು ಸಾಧ್ಯವಿಲ್ಲ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಎನ್.ಎಂ.ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಅಭ್ಯಾಸದ ಪ್ರೀತಿ ಇಲ್ಲದವನು ಯಾವತ್ತು ಸಾಧಕನಾಗಲು ಸಾಧ್ಯವಿಲ್ಲ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಎನ್.ಎಂ.ಬಿರಾದಾರ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜು ಶನಿವಾರ ಹಮ್ಮಿಕೊಂಡ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾಧಿಸುವಾಗ ಅನೇಕ ಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಹಂತ, ಹಂತವಾಗಿ ಮೆಟ್ಟಿ ನಿಲ್ಲುವ ಸಾಮರ್ಥ್ಯ ಪಡೆದುಕೊಳ್ಳಬೇಕು. ನಿಮ್ಮ ಬದುಕಿನ ಪಯಣ ಯಾವತ್ತು ನಕಲಿಯಿಂದ ಕೂಡಿರಬಾರದು, ಹಾಗಾದಲ್ಲಿ ನಮ್ಮ ಬದುಕೇ ನಕಲಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಸಮಾಜ ಹದಗೆಡುತ್ತಿದೆ. ವಿದ್ಯಾರ್ಥಿಗಳಾದವರು ಕೆಲವು ವಿಚಾರಗಳಿಂದ ಸ್ವಯಂ ನಿಯಂತ್ರಣ ಮಾಡಿದ್ದೇ ಆದಲ್ಲಿ ನೀವು ಉನ್ನತ ಸ್ಥಾನಕ್ಕೆ ಹೋಗುತ್ತಿರಿ. ಇಂದು ವಿದ್ಯಾರ್ಥಿಗಳಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಉತ್ತಮ ವರ್ತನೆ, ಜ್ಞಾನ ಮತ್ತು ಕೌಶಲ್ಯಗಳು. ಅವುಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬದುಕು ಸುಂದರವಾಗಿದೆ. ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅನೇಕ ಅವಕಾಶಗಳಿವೆ. ಯೋಗ್ಯ ಅವಕಾಶಗಳು ಯೋಗ್ಯ ಸ್ನೇಹಿತರಿಂದ ಉತ್ತಮ ಸಮಾಜದಿಂದ ಸಿಗುತ್ತವೆ ಎಂದು ತಿಳಿಸಿದರು.

ವಿಜಯಪುರ ಗ್ರಾಮೀಣ ಉಪವಿಭಾಗದ ಪೊಲೀಸ್‌ ಉಪ ಅಧೀಕ್ಷಕ ಟಿ.ಎಸ್.ಸುಲ್ಪಿ ಮಾತನಾಡಿ, ಮನುಷ್ಯನಿಗೆ ಛಲವಿರಬೇಕು, ಸಾಧಿಸುತ್ತೇನೆಂಬ ದೃಢ ವಿಶ್ವಾಸವಿರಬೇಕು. ಜಗತ್ತಿನಲ್ಲಿ ಸಾಧಕರ ಸಾಲಿನಲ್ಲಿರುವವರು ಹೆಚ್ಚು ಬಡ ವರ್ಗದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ನಮ್ಮಲ್ಲಿ ಜ್ಞಾನವಿದ್ದರೇ ನಮ್ಮ ಸಾಧನೆಗೆ ಯಾವತ್ತು ಬಡತನ ಅಡ್ಡಿಯಾಗುವುದಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಹೊಸ ಕನಸುಗಳನ್ನು ಕಾಣಬೇಕು. ಓದು ನಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೊಗುತ್ತದೆ. ಇಂದು ಶಿಕ್ಷಣಕ್ಕೆ ಪಡೆಯುವುದಕ್ಕೆ ಸರ್ಕಾರ, ಸಂಘ ಸಂಸ್ಥೆಗಳು ಏನೆಲ್ಲ ವ್ಯವಸ್ಥೆ ಮಾಡಿದರೂ ಯುವ ಜನಾಂಗ ಅದನ್ನು ಯೋಗ್ಯ ರೀತಿಯಲ್ಲಿ ಪಡೆದುಕೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಸಂಸ್ಥೆ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಯಾರು ಬದುಕಿನಲ್ಲಿ ಕಷ್ಟ ಪಡುತ್ತಾರೇ ಮುಂದೆ ಅವರಿಗೆ ಇಷ್ಟಾಪಟ್ಟಿದ್ದು ಸಿಕ್ಕೆ ಸಿಗುತ್ತದೆ. ನಮ್ಮ ಜ್ಞಾನದಿಂದಲೇ ಸಮಾಜ ನಮ್ಮನ್ನು ಗುರುತಿಸುತ್ತದೆ. ಓದುವ ಹವ್ಯಾಸ ರೂಢಿಸಿಕೊಂಡರೇ ಆ ಓದು ನಮ್ಮನ್ನು ಮೇಲೆತ್ತುತ್ತದೆ ಎಂದು ನುಡಿದರು.ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ 2024-25ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು. ವೇದಿಕೆ ಮೇಲೆ ಕಾರ್ಯಾಧ್ಯಕ್ಷ ಡಾ.ಬಸವರಾಜ ಜಮಾದಾರ, ವಿದ್ಯಾರ್ಥಿ ಪ್ರತಿನಿಧಿ ಸುಪ್ರಿತಾ ಮಾವೂರ ಇದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ನಿವೃತ್ತ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.ನಾನು ಚಾಣಕ್ಯ ಸ್ಪರ್ಧಾತ್ಮಕ ಸಂಸ್ಥೆಯನ್ನು ಕೇವಲ 7 ವಿದ್ಯಾರ್ಥಿಗಳಿಂದ ಪ್ರಾರಂಭ ಮಾಡಿದವನು. ಸಂಸ್ಥೆ ಕಟ್ಟುವ ಸಮಯದಲ್ಲಿ ಅನೇಕ ದೊಡ್ಡ, ದೊಡ್ಡ ಸಮಸ್ಯೆಗಳು ಬಂದರೂ ತಾಳ್ಮೆಯಿಂದ ಇರುತ್ತಿದ್ದೆ. ಇಂದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ. ಸಾವಿರಾರು ಮಕ್ಕಳು ಸರ್ಕಾರಿ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ನನ್ನ ಪುಸ್ತಕ ಪ್ರೀತಿಯಿಂದ. ಜ್ಞಾನವೇ ಜಗತ್ತು, ಜ್ಞಾನವೇ ಶಕ್ತಿ ಜ್ಞಾನಕ್ಕೆ ಸಮಾಜ ತೆಲೆ ಬಾಗುತ್ತದೆ.

-ಎನ್.ಎಂ.ಬಿರಾದಾರ,

ಮುಖ್ಯಸ್ಥರು, ಚಾಣಕ್ಯ ಕರಿಯರ್‌ ಅಕಾಡೆಮಿ ವಿಜಯಪುರ.